ಆಧ್ಯಾತ್ಮ ರಾಜ್ಯ

ನ. 17ರಂದು ಕಾಲೇಜು ಆರಂಭಿಸಲು ದಾವಣಗೆರೆ ವಿವಿ ಸಜ್ಜು

ದಾವಣಗೆರೆ prajakiran.com : ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ನವೆಂಬರ್ 17ರಂದು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೋವಿಡ್-19ರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದ ಜೊತೆಗೆ ಅವರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ಅವರು ಶುಕ್ರವಾರ ಆನ್‍ಲೈನ್‍ನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸಂಲಗ್ನ ಕಾಲೇಜುಗಳ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್-19ರ ಎಲ್ಲಾ ಮೂಲ ಮತ್ತು ಸಾಮಾನ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷವನ್ನು 8 ತಿಂಗಳ ನಂತರ ಮತ್ತೆ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಯುಜಿಸಿ ಮತ್ತು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದ ಸೂಚನೆ ಮತ್ತು ನಿಯಮಾವಳಿಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಕಾಲೇಜು ಮತ್ತು ವಿಶ್ವವಿದ್ಯಾಲಯ ಆವರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.

ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಆರೋಗ್ಯದ ನಿರಂತರ ಮೇಲ್ವಿಚಾರಣೆಯ ಉದ್ದೇಶದಿಂದ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರಗಳು ಮತ್ತು ಎಲ್ಲಾ ಕಾಲೇಜುಗಳಲ್ಲಿ ಕೋವಿಡ್ ನಿಯಂತ್ರಣ ಕೇಂದ್ರ ಸ್ಥಾಪಿಸಿ, ನೋಡಲ್ ಅಧಿಕಾರಿ ನೇಮಿಸಲಾಗುತ್ತಿದೆ.

ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ನಡೆಯಲಿವೆ. ಆನ್‍ಲೈನ್‍ನಲ್ಲೂ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ದೈಹಿಕವಾಗಿ ತರಗತಿಗೆ ಹಾಜರಾಗಲು ಇಚ್ಛಿಸುವ ವಿದ್ಯಾರ್ಥಿಗಳು ಕೋವಿಡ್-19 ಪರೀಕ್ಷೆಯ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ ವೈಯಕ್ತಿಕ ಜವಾಬ್ದಾರಿಯ ಬಗ್ಗೆ ಪಾಲಕರಿಂದ ಅನುಮತಿ ಪತ್ರವನ್ನೂ ಸಲ್ಲಿಸಬೇಕು.

ಜೊತೆಗೆ ಸರ್ಕಾರ ಮತ್ತು ವಿಶ್ವವಿದ್ಯಾಲಯದ ನಿಯಮಗಳನ್ನು ಪಾಲಿಸುವುದಾಗಿ ವೈಯಕ್ತಿಕ ಮುಚ್ಚಳಿಕೆ ಪತ್ರವನ್ನು ಬರೆದುಕೊಡುವುದನ್ನೂ ಕಡ್ಡಾಯ ಮಾಡಲಾಗಿದೆ.

ವಿದ್ಯಾರ್ಥಿಗಳು ದೈಹಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದರೆ ಆನ್‍ಲೈನ್‍ನಲ್ಲೂ ಪಾಲ್ಗೊಳ್ಳಬಹುದು. ಹಾಜರಾತಿ ಕಡ್ಡಾಯಗೊಳಿಸಿಲ್ಲ.

ಆರಂಭದಲ್ಲಿ ಬೋಧನೆಗೆ ಸೀಮಿತಗೊಳಿಸಿದ್ದು, ಹಂತಹಂತವಾಗಿ ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಕ್ಯಾಂಟೀನ್, ಹಾಸ್ಟೆಲ್, ಕಾಲೇಜು ಕೊಠಡಿಗಳಲ್ಲಿ ಪ್ರತಿದಿನವೂ ಸ್ಯಾನಿಟೈಸೇಷನ್ ಮಾಡುವುದು, ಕಿಡಕಿ, ಬಾಗಿಲುಗಳನ್ನು ಸ್ವಚ್ಛಗೊಳಿಸುವುದು, ಸ್ಪರ್ಶಿಸಲು ಅವಕಾಶವಿರದ ಕಸದ ತೊಟ್ಟಿಯ ವ್ಯವಸ್ಥೆ ಮಾಡಲಾಗುತ್ತಿದೆ.

ಕುಡಿಯುವ ನೀರನ್ನು ವಿದ್ಯಾರ್ಥಿಗಳೇ ತರಬೇಕು. ಊಟ-ಉಪಹಾರದ ಸಂದರ್ಭದಲ್ಲೂ ಸರ್ಕಾರದ ನಿಮಯಗಳನ್ನು ಪಾಲಿಸಲೇಬೇಕು.

ಇದರಲ್ಲಿ ಯಾವುದೇ ಲೋಪವಾದರೂ ಕಾಲೇಜಿನ ಪ್ರಾಚಾರ್ಯರು ಮತ್ತು ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಸೂಚಿಸಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕಾಲಕಾಲಕ್ಕೆ ಧ್ವನಿವರ್ಧಕ ಬಳಸಿ ಮಾಹಿತಿ ನೀಡಬೇಕು.

ಕಾಲಕಾಲಕ್ಕೆ ಸಕಾಲಿಕ ಸರ್ಕಾರದ ಆದೇಶ, ಸೂಚನೆಗಳನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅಗತ್ಯವಿರುವ ಪೂರಕ ಮಾಹಿತಿಯನ್ನು ಒದಗಿಸಲು ಪ್ರಾಧ್ಯಾಪಕರು ಗಮನ ನೀಡಲು ತಿಳಿಸಲಾಗಿದೆ ಎಂದರು.

ಸಭೆಯಲ್ಲಿ ಕುಲಸಚಿವ ಪ್ರೊ. ಬಸವರಾಜ ಬಣಕಾರ, ವಿವಿ ಕೋವಿಡ್ ನೋಡಲ್ ಅಧಿಕಾರಿ ಡಾ. ಶರತ್, ವಿವಿಧ ಕಾಲೇಜುಗಳ ಪ್ರಾಚಾರ್ಯರು, ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *