ಜಿಲ್ಲೆ

ಕವಿತಾ ಹಿರೇಮಠಗೆ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ

*ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜಗದ್ಗುರು ಪೀಠದಿಂದ ಪ್ರದಾನ*

*ಕವಿತಾ ಹಿರೇಮಠರಿಗೆ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ*

*ಧಾರವಾಡ ಪ್ರಜಾಕಿರಣ.ಕಾಮ್ : ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಮಹಿಳೆಯರಿಗೆ ವೀರಶೈವ ಧರ್ಮದ ಪಂಪೀಠಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ವಾರಾಣಾಸಿಯ ಕಾಶಿ ಜಗದ್ಗುರು ಪೀಠವು ಪ್ರದಾನ ಮಾಡುವ ‘ಶ್ರೀಮತಿ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಕವಿತಾ ಗುರುಸಿದ್ಧಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.

ವಾರಾಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕಮಲೇಶ ಝಾ, ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸುಧಾಕರ ಮಿಶ್ರಾ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ವಿನೋದ್ ಪಾಠಕ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಧಾರವಾಡದ ಕವಿತಾ ಹಿರೇಮಠ ಅವರ ಆಯ್ಕೆಯನ್ನು ಪ್ರಕಟಿಸಿದೆ.

ಮೂಲತಃ ಧಾರವಾಡ ತಾಲೂಕು ಮಾರಡಗಿ ಗ್ರಾಮದವರಾದ ಕವಿತಾ ಅವರು ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನೀಡಿದ ಶ್ರೀಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನಗಳನ್ನು ಕೇಳಿ ಪ್ರಭಾವಿತರಾಗಿ ಅವರ ಮಾರ್ಗದರ್ಶನದಲ್ಲಿಯೇ ಸಂಸ್ಕೃತ ಅಧ್ಯಯನವನ್ನು ರೂಢಿಸಿಕೊಂಡರು. ವಿಶ್ವದ 19 ಭಾಷೆಗಳಲ್ಲಿ ಲಭ್ಯವಿರುವ ವೀರಶೈವ ಧರ್ಮಗ್ರಂಥವಾದ ಶ್ರೀಸಿದ್ಧಾಂತ ಶಿಖಾಮಣಿಯ ಪಾರಾಯಣದಲ್ಲಿ ಪರಿಪಕ್ವತೆಯನ್ನು ಸಾಧಿಸಿ ಕಳೆದ ಸುಮಾರು 3 ದಶಕಗಳ ಕಾಲ ದೇಶದ ಉದ್ದಗಲಕ್ಕೂ ಲಕ್ಷಾಂತರ ಜನರಿಗೆ ಸಿದ್ಧಾಂತ ಶಿಖಾಮಣಿಯ ಸಾರವನ್ನು ತಲುಪಿಸಿದ ಕೀರ್ತಿಗೆ ಕವಿತಾ ಹಿರೇಮಠ ಭಾಜನರಾಗಿದ್ದಾರೆ. ವಿಶೇಷವಾಗಿ ಶ್ರೀರುದ್ರ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಗ್ರಂಥಗಳಲ್ಲಿ ಅಡಗಿರುವ ಜನಪರ ನಿಲುವುಗಳನ್ನು ಕೇಂದ್ರೀಕರಿಸಿ ಅವುಗಳನ್ನು ಕರ್ನಾಟಕವೂ ಸೇರಿದಂತೆ ಭಾರತದ ಉದ್ದಗಲಗಕ್ಕೂ ಜನಮನಕ್ಕೆ ಮುಟ್ಟಿಸುವಲ್ಲಿ ಇವರು ನಿರಂತರ ಶ್ರಮಿಸಿದ್ದಾರೆ.

ಮಹಾರಾಷ್ಟ್ರದ ಖ್ಯಾತ ಉದ್ಯಮಿ ಬಾಬಾಸಾಹೇಬ ಕಲ್ಯಾಣಿ ಅವರ ಧರ್ಮಪತ್ನಿ ಸುನಿತಾ ಕಲ್ಯಾಣಿ ಅವರು ತಮ್ಮ ಮಾತೋಶ್ರೀ ದಿವಂಗತ ಮಾಲತಿ ಮಹಾರುದ್ರಪ್ಪ ಖೇಣಿ ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಪುರಸ್ಕಾರವೊಂದನ್ನು ಅತ್ಯುನ್ನತ ಸಾಧನೆ ಮಾಡಿದ ಮಹಿಳೆಗೆ ಪುರಸ್ಕಾರ ನೀಡಲು ಸಂಕಲ್ಪಿಸಿ ಕಾಶಿ ಜಗದ್ಗುರು ಪೀಠದಲ್ಲಿ ದತ್ತಿನಿಧಿ ಸ್ಥಾಪಿಸಿದ್ದಾರೆ. ‘ಶ್ರೀಮತಿ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ’ವು ಒಂದು ಲಕ್ಷ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಜುಲೈ 22 ರಂದು ಮಹಾರಾಷ್ಟçದ ಸೊಲ್ಲಾಪೂರ ನಗರದಲ್ಲಿ ಈ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭವು ಕಾಶಿ ಪೀಠದ ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ಕಾಶಿ ಜಗದ್ಗುರು ಪೀಠದ ವ್ಯವಸ್ಥಾಪಕ ಶಿವಾನಂದ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *