ವಿನಯ ಕುಲಕರ್ಣಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

*ಹೈಕೋರ್ಟ್ ಏಕಸದಸ್ಯಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮಹತ್ವದ ಆದೇಶ*

*ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆ ಎದುರಿಸಲು ಸೂಚನೆ*

*ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಆದೇಶ*

ಬೆಂಗಳೂರು ಪ್ರಜಾಕಿರಣ.ಕಾಮ್ :
ಧಾರವಾಡ ಗ್ರಾಮೀಣ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಸಿಬಿಐ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಹಲವು ದೋಷಗಳಿವೆ.

ಹೀಗಾಗಿ ಅದನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶಾಸಕರ-ಸಂಸದರ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ‌.

ಅರ್ಜಿದಾರ ವಿನಯ ಕುಲಕರ್ಣಿ ಪರ ವಕೀಲರ ಕುಲೂಂಕುಷವಾದ ವಾದ ಹಾಗೂ ಸಿಬಿಐ ಪರ ಕೇಂದ್ರ ಸರಕಾರದ ಏಡಿಸನಲ್ ಸಾಲಿಸೇಟರ್ ಜನರಲ್ ಎಸ್.ವಿ. ರಾಜು ಹಾಗೂ ಪ್ರಸನ್ನಕುಮಾರ್ ಅವರ ಪ್ರತಿವಾದ ಆಲಿಸಿದ ಬಳಿಕ ಈ ತೀರ್ಪು ಪ್ರಕಟಿಸಿದ್ದಾರೆ.

ವಿನಯ ಕುಲಕರ್ಣಿ ಅವರ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ವಿಚಾರಣೆ ಎದುರಿಸಲು ಸೂಚನೆ ನೀಡಿದ್ದಾರೆ.

ಅಲ್ಲದೆ, ವಿಚಾರಣೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಆದೇಶಿಸಿದ್ದಾರೆ.

ಅವರು ಈ ಹಿಂದೆ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಅರ್ಜಿ ಮೇಲೆ ಅರ್ಜಿ ಹಾಕುವ ಮೂಲಕ ನೀವು
ಅನಗತ್ಯವಾಗಿ ನ್ಯಾಯಾಲಯದ ಸಮಯ ಹಾಳು ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಲ್ಲದೆ, ನಾನು ಧಾರವಾಡ ಗ್ರಾಮೀಣ ಶಾಸಕನಾಗಿರುವುದರಿಂದ ತಮಗೆ ಧಾರವಾಡ ಜಿಲ್ಲೆಯ ಪ್ರವೇಶ ನೀಡುವ ಮೂಲಕ ಷರತ್ತು ಬದ್ಧ ಜಾಮೀನಿನ ಸಡಲಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡುವ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೂಡ ತಾವು ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವುದೇ ದೊಡ್ಡ ವಿಷಯ ಎಂದು ನೆನಪಿಸಿದ್ದರು.

ಈ ಹಿಂದೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕೂಡ ನ್ಯಾಯಾಧೀಶರು ಜ.29ರಿಂದ ಫೆ. 1ರ ವರೆಗೆ ಟ್ರಯಲ್ ನಿಗದಿಪಡಿಸಿದ್ದರು.

ಇದೀಗ ಅವರು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುತ್ತಾರೆಯೇ ಅಥವಾ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸುತ್ತಾರಾ ಎಂಬುದನ್ನು ಬರುವ ದಿನಗಳಲ್ಲಿ ‌ಕಾದು‌ನೋಡಬೇಕಿದೆ.