ಬೆಂಗಳೂರು ಪ್ರಜಾಕಿರಣ.ಕಾಮ್ : ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅರೆಸ್ಟ್ ಬೆನ್ನ ಹಿಂದೆಯೇ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣನನ್ನ ಸಿಐಡಿ ಪೊಲೀಸರು ಎಂಟು ದಿನಗಳ ಕಾಲ ಹೆಚ್ಚಿನ ವಿಚಾರಣೆ ನಡೆಸಲು ವಶಕ್ಕೆ ತೆಗೆದುಕೊಂಡಿದ್ದಾರೆ.
ಹಾಸನದ ಸೆನ್ ಪೊಲೀಸ್ ಠಾಣೆಯಲ್ಲಿ ಅಸಹಜ ಲೈಂಗಿಕ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದ್ದರಿಂದ ಸಿಐಡಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿ ಹೆಚ್ಚಿನ ವಿಚಾರಣೆಗಾಗಿ ಬಾಡಿ ವಾರೆಂಟ್ ನೀಡಿದ್ದರು.
ಸಿಐಡಿ ಪರ ವಕೀಲರು ವಾದ ಮಂಡಿಸಿ ಹದಿನಾಲ್ಕು ದಿನಗಳ ಕಾಲ ಸಿಐಡಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಆದರೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇವಲ ಎಂಟು ದಿನಗಳ ಕಾಲ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಸಿಐಡಿ ಪೊಲೀಸರು ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿಗೆ ತೆರಳಿ ಸೂರಜ್ ವಶಕ್ಕೆ ತೆಗೆದುಕೊಂಡು ಧ್ವನಿ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ತನಿಖೆ ನಡೆಸಲಿದ್ದಾರೆ.
ಈ ಕುರಿತಂತೆ ಸೂರಜ್ ರೇವಣ್ಣ ವಿರುದ್ದ ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 ( ಅಸ್ವಾಭಾವಿಕ ಅಪರಾಧ ), 342 ( ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಜೀವ ಬೆದರಿಕೆ ) ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.
ಈ ಮುಂಚೆ ಡಿಜಿಪಿ ಹಾಗೂ ಹಾಸನ ಎಸ್ಪಿಗೂ ಸಂತ್ರಸ್ತ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಕರಣ ಸಂಬಂಧ
ಶನಿವಾರ ರಾತ್ರಿ ತನ್ನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಂತ್ರಸ್ತನ ವಿರುದ್ಧವೇ ಪ್ರತಿ ದೂರು ನೀಡಲು ತೆರಳಿದ್ದಾಗ ಸೂರಜ್ ರೇವಣ್ಣನನ್ನು ಪೊಲೀಸರು ಖೆಡ್ಡಾಗೆ ಕೆಡವಿದ್ದರು.
*ಸಂತ್ರಸ್ತನ ದೂರಿನ ವಿವರ* :
ಸೂರಜ್ ರೇವಣ್ಣ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪರಿಚಯವಾಗಿದ್ದರು.
ನಾನು ಅವರ ತಮ್ಮ ಪ್ರಜ್ವಲ್ ರೇವಣ್ಣ ಪರ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನ್ನ ನಂಬರನ್ನ ಸೂರಜ್ ತೆಗೆದುಕೊಂಡಿದ್ದರು. ಜೂ.14 ರಂದು ಸೂರಜ್ ನನಗೆ ಮೆಸೇಜ್ ಮಾಡಿದ್ದರು. ಮೆಸೇಜ್ನಲ್ಲಿ ನನ್ನ ಬಗ್ಗೆ ಎಲ್ಲಾ ಮಾಹಿತಿ ಪಡೆದಿದ್ದರು.
ನಂತರ ಜೂ.16 ರಂದು ಹೊಳೆನರಸೀಪುರ ತಾಲೂಕಿನ, ಗನ್ನೀಕಡ ತೋಟಕ್ಕೆ ಸಂಜೆ ಬರಲು ಹೇಳಿದ್ದರು. ನಾನು ಹೋದ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದರು. ನನಗೆ ಇಷ್ಟವಿಲ್ಲದಿದ್ದರೂ ಲೈಂಗಿಕ ಕಿರುಕುಳ ನೀಡಿದ್ದಾರೆ.
ಆ ಸಂದರ್ಭ ನನಗೆ ಪುರುಷರನ್ನು ಕಂಡರೆ ಆಸಕ್ತಿ ಮಹಿಳೆಯರನ್ನು ಕಂಡರೆ ಆಸಕ್ತಿ ಇಲ್ಲ ಎಂದು ಹೇಳಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.