ರಾಜ್ಯ

*ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ: ಸಿ.ಎಂ

*ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ: ಸಿ.ಎಂ*

*ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ UPA ಸರ್ಕಾರದ ಬಗ್ಗೆ ಮೋದಿ ಅವರು ಹಿಂದೆ ಹೇಳಿದ್ದ ಮಾತನ್ನು ಉಲ್ಲೇಖಿಸಿ ತಿರುಗೇಟು ನೀಡಿದ ಸಿ.ಎಂ.ಸಿದ್ದರಾಮಯ್ಯ*

*ಮೋದಿ ಅವರು ಸಿ.ಎಂ ಆಗಿದ್ದಾಗ ಗುಜರಾತ್ ರಾಜ್ಯಕ್ಕೆ ಶೇ50 ರಷ್ಟು ತೆರಿಗೆ ಪಾಲು ಕೇಳಿದ್ದರು. ಈಗ ಅವರು ಪ್ರಧಾನಿ ಆಗಿ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ 12 ರಷ್ಟು ವಾಪಾಸ್ ಕೊಡುತ್ತಿದ್ದಾರೆ: ಮೋದಿ ಅವರ ಮಾತು ಮತ್ತು ವರ್ತನೆಗೆ ಅಂಕಿ ಅಂಶಗಳ ಕನ್ನಡಿ ಹಿಡಿದ ಸಿ.ಎಂ.ಸಿದ್ದರಾಮಯ್ಯ*

ಬೆಂಗಳೂರು ಫೆ 21: ಮೋದಿ ಅವರು ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದರು.

ವಿಧಾನ‌ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡುವಾಗ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿವರಿಸುವಾಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಬಿಸಿ ಬಿಸಿ ವಾಗ್ವಾದ ನಡೆಯಿತು.

ಕೇಂದ್ರದಲ್ಲಿ UPA ಸರ್ಕಾರ ಇದ್ದಾಗ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಮೋದಿಯವರು, ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿದ್ದ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ಮೋದಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ, ರಾಜ್ಯಗಳು ಕೇಂದ್ರದ ಮುಂದೆ ಭಿಕ್ಷುಕರಲ್ಲ. ಗುಜರಾತ್ ರಾಜ್ಯದಿಂದ ಸಂಗ್ರಹ ಆಗುವ ತೆರಿಗೆಯಲ್ಲಿ ಶೇ50 ರಷ್ಟು ವಾಪಾಸ್ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದರು. ಗುಜರಾತ್ ರಾಜ್ಯದ ತೆರಿಗೆಯನ್ನು ನಾವು ಕೇಂದ್ರಕ್ಕೆ ಕೊಡುವುದಿಲ್ಲ ಎನ್ನುವ ಮಾತನ್ನೂ ಮೋದಿ ಅವರು ಆಡಿದ್ದರು. ಆದರೆ ಈಗ ಅದೇ ಮೋದಿ ಅವರು ಪ್ರಧಾನಿ ಆಗಿರುವಾಗ ಕರ್ನಾಟಕ ರಾಜ್ಯಕ್ಕೆ ವಾಪಾಸ್ ಕೊಡುತ್ತಿರುವುದು ಶೇ 12-13 ರಷ್ಟು ಮಾತ್ರ. ಮೋದಿ ಅವರು ಆಗೊಂದು ಮಾತು ಈಗೊಂದು ರೀತಿ ಮಾತನಾಡಿದ್ದಾರೆ. ಇದನ್ನು ಪ್ರಸ್ತಾಪಿಸಿದರೆ ನಿಮಗೇಕೆ ಸಿಟ್ಟು ಎಂದು ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.

ನಾವು ಕೊಡುವ ಪ್ರತಿ 100 ರೂಪಾಯಿಗೆ ಕೇವಲ 12 ರೂ ವಾಪಾಸ್ ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗಲು ಹೇಗೆ ಸಾಧ್ಯ? ಇಷ್ಟು ಕಡಿಮೆ ಪಾಲು ನಮಗೆ ಕೊಟ್ಟರೆ ರಾಜ್ಯದ ಶೂದ್ರರು, ದಲಿತರು, ಆದಿವಾಸಿಗಳು, ದುಡಿಯುವವರು, ಶ್ರಮಿಕರು, ಯುವಕರ, ಮಹಿಳೆಯರ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಹಣದ ಪಾಲು ಅನ್ಯಾಯವಾದುದು.2018-19ರಲ್ಲಿ ಕೇಂದ್ರ ಬಜೆಟ್ ಗಾತ್ರ 24,44,213 ಕೋಟಿ ಇತ್ತು. ಅಂದು ರಾಜ್ಯಕ್ಕೆ 51000 ಕೋಟಿ ಮಾತ್ರ ಬಂತು. 2020-21 ಸಾಲಿನಲ್ಲಿ ಕೇಂದ್ರದ ಬಜೆಟ್ ಗಾತ್ರ 30,42,243 ಕೋಟಿ ಇದ್ದರೆ ನಮಗೆ ಬಂದಿದ್ದು 31734ಕೋಟಿ ರೂ., 2021-22 ರಲ್ಲಿ 34,83,236 ಕೋಟಿ ಗಾತ್ರದ ಬಜೆಟ್ ಗೆ , ರಾಜ್ಯಕ್ಕೆ 48589 ಕೋಟಿ ಬಂತು. 2022-23ರಲ್ಲಿ ಕೇಂದ್ರದ ಬಜೆಟ್ 4181232 ಕೋಟಿ , ರಾಜ್ಯಕ್ಕೆ 53510 ಕೋಟಿ ಮಾತ್ರ ಬಂತು. 2023-24ರಲ್ಲಿ 45,03007 ಕೋಟಿ ಕೇಂದ್ರದ ಬಜೆಟ್ ಗಾತ್ರ. ರಾಜ್ಯಕ್ಕೆ ಬಂದಿದ್ದು 50257 ಕೋಟಿ ಮಾತ್ರ. 2024-25ರಲ್ಲಿ ರಾಜ್ಯಕ್ಕೆ 59785 ಕೋಟಿ ಬರುತ್ತದೆ ಎಂದು ರಾಜ್ಯಕ್ಕೆ ಆಗುತ್ಯಲೇ ಇರುವ ಅನ್ಯಾಯದ ಅಂಕಿ ಅಂಶಗಳನ್ನು ಬಿಚ್ಚಿಟ್ಟರು.

ಈ ರೀತಿ ಬಜೆಟ್ ಗಾತ್ರ ದೊಡ್ಡದಾದರೂ, ನಮಗೆ ಬರುತ್ತಿರುವ ಪಾಲು ಕಡಿಮೆಯಾಗುತ್ತಿದೆ. ಪ್ರಧಾನಿ ಅವರು ರಾಷ್ಟ್ರಪತಿಗಳ ಭಾಷಣದ ಚರ್ಚೆಗೆ ಉತ್ತರಿಸುತ್ತಾ ರಾಜ್ಯದ ತೆರಿಗೆ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ‘ದೇಶದ ಐಕ್ಯತೆಗೆ ಅಪಾಯವೊಡ್ಡುತ್ತದೆ’ ಎಂದಿದ್ದರು. ಅದೇ ಪ್ರಧಾನಿ ಮಂತ್ರಿಗಳು ಗುಜರಾತಿನ ಸಿಎಂ ಆಗಿದ್ದಾಗ 2012 ರಲ್ಲಿ ಗುಜರಾತಿಗೆ ಬರುತ್ತಿರುವ ಆರ್ಥಿಕ ಪಾಲನ್ನು ವಿರೋಧಿಸಿದ್ದರು. ಗುಜರಾತ್ ರಾಜ್ಯ ’ನಾವು ಭಿಕ್ಷುಕ ರಾಜ್ಯವೇ, ನಾವು ಭಿಕ್ಷುಕರೆ, ನಾವು ಕೇಂದ್ರದ ಕರುಣೆಯ ಮೇಲೆ ಬದುಕಬೇಕೆ’ ಎಂದಿದ್ದರು. ಅಂದಿನ ಕೇಂದ್ರಕ್ಕೆ ‘ಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆ’ಎಂದು ಮೋದಿ ಅವರು ಅಂದಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ ಎಂದು ಅಂದಿನ ಮೋದಿಯವರ ಮಾತನ್ನೇ ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *