ಧಾರವಾಡ prajskiran.com : ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಭಾಗಿಯಾದವರ ಹೆಸರುಗಳನ್ನು ಮುಖ್ಯಮಂತ್ರಿ ಬೊಮ್ಮಾಯಿ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದರು.
ಅವರು ಶನಿವಾರ ನಗರದಲ್ಲಿ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರ ಸಹೋದರ ಗಿರೀಶನ ಅಗಲಿಕೆಯ ಹಿನ್ನೆಲೆಯಲ್ಲಿ ಚಿಂಚೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಐಡಿ ಅಧಿಕಾರಿಗಳು ಬಂಧಿಸಿದವರಲ್ಲಿ ಕೆಲವರನ್ನು ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಡಾ.ಅಶ್ವಥ್ ನಾರಾಯಣ ಹೊರಗಡೆ ತಂದಿದ್ದಾರೆ. ಎಷ್ಟೋ ಜನ ನಾಯಕರ ಹೆಸರುಗಳು ವಿಚಾರಣೆಯ ವೇಳೆ ಬಂಧಿತರಿಂದ ಹೊರಬಂದಿವೆ.
ಆದರೆ, ಗೃಹ ಸಚಿವ ಮತ್ತು ಅಶ್ವಥ್ ನಾರಾಯಣ ಮೂಗಿನ ಕೆಳಗೆ ಎಲ್ಲಾ ತನಿಖೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಅನೇಕ ಹಿರಿಯ ಅಧಿಕಾರಿಗಳು ಕೂಡ ಈ ಅಕ್ರಮದಲ್ಲಿ ಶಾಮೀಲಾಗಿದ್ದು, ಗೃಹ ಸಚಿವರು ತನಿಖೆ ಮಾಡುವವರನ್ನು ಫ್ರೀ ಹ್ಯಾಂಡ್ ಆಗಿ ಬಿಡಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವರೇ ಈ ಪ್ರಕರಣದಲ್ಲಿನ ಎಲ್ಲಾ ಕಳ್ಳರ ರಕ್ಷಣೆ ಮಾಡುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.
ಸಿಎಂ ತಾವು ಕ್ಲಿನ್ ಎಂದು ಉಳಿದುಕೊಳ್ಳಬೇಕಾದರೆ ಎಲ್ಲಾ ಹೆಸರು ಬಹಿರಂಗ ಪಡಿಸಲು ಮುಂದಾಗಬೇಕು ಎಂದು ಸವಾಲು ಹಾಕಿದರು.