ರಾಜ್ಯ

2016ರಿಂದ ನಡೆದ ಎಲ್ಲಾ ಅಕ್ರಮ ನೇಮಕಾತಿ ಸಿಬಿಐ ತನಿಖೆ ಆಗಲಿ : ಬಸವರಾಜ ಕೊರವರ

ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ :
ಧಾರವಾಡದಲ್ಲಿ ಸಾವಿರಾರು ಅಭ್ಯರ್ಥಿಗಳಿಂದ
ಕರಾಳ ದಿನಾಚರಣೆ

ಶೀಘ್ರ ಮರು ಪರೀಕ್ಷೆ ದಿನಾಂಕ ನಿಗದಿಪಡಿಸದಿದ್ದರೆ ಕಾನೂನು ಹೋರಾಟ

ಗೃಹಸಚಿವರ ಮನೆ ಎದುರು ಬೃಹತ್ ಪ್ರತಿಭಟನೆ ಎಚ್ಚರಿಕೆ

ಧಾರವಾಡ prajakiran.com : ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಸಾವಿರಾರು ಅಭ್ಯರ್ಥಿಗಳು ಕೈ ಗೆ ಕಪ್ಪು ಬಟ್ಟೆ ಧರಿಸಿ ಒಂದು ದಿನದ ಕರಾಳ ದಿನಾಚರಣೆ ನಡೆಸಿದರು.

ರಾಜ್ಯದ ಭ್ರಷ್ಟ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅಭ್ಯರ್ಥಿಗಳು, ಮರು ಪರೀಕ್ಷೆ ದಿನಾಂಕ ಪ್ರಕಟಿಸಲು ಸರಕಾರ ಮೀನಾಮೇಷ ಎಣಿಸಬಾರದು

ಒಂದು ವೇಳೆ ಇದೇ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, 545 ಪಿಎಸ್ ಐ ಅಕ್ರಮ ಹಗರಣ ನಡೆದು ಇಷ್ಟು ದಿನ ಕಳೆದರೂ ಸಿಐಡಿ ಅಧಿಕಾರಿಗಳು ಬಲಿಷ್ಠ ಹಾಗೂ ಕಾಣದ ಕೈ ಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆ.

ಎಡಿಜಿಪಿ ತನಿಖೆ ಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿರುವುದು ನೋವಿನ ಸಂಗತಿಯಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಿಲಾಪಿ ಕುಸ್ತಿ ನಡೆಸಿ, ಜನರನ್ನು ಮೂರ್ಖರನ್ನಾಗಿಸುತ್ತಿವೆ..

ಹೀಗಾಗಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮದ ವಾಸನೆ ಕೇಳಿಬರುತ್ತಿದ್ದು,
2016ರಿಂದ ನಡೆದ ಎಲ್ಲಾ ಅಕ್ರಮ ನೇಮಕಾತಿ ಸಿಬಿಐ ತನಿಖೆ ಆಗಲಿ ಎಂದು ಒತ್ತಾಯಿಸಿದರು.

ಜೊತೆಗೆ ಶೀಘ್ರವಾಗಿ ಮರು ಪರೀಕ್ಷೆ ದಿನಾಂಕ ಪ್ರಕಟಿಸದಿದ್ದರೆ ಗೃಹ ಸಚಿವರ ಮನೆ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಕುರಿತು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದರು.

ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದುಹೋಗಿದ್ದು, ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮದ ವಾಸನೆ ಕೇಳಿ ಬರುತ್ತಿದ್ದು, ಇದು ಭ್ರಷ್ಟಾಚಾರದ ಕೈ ಗನ್ನಡಿಯಾಗಿದೆ.

ಇಷ್ಟಾದರೂ ವ್ಯವಸ್ಥೆ ಗೆ ಚಾಟಿ ಬೀಸಬೇಕಾದ ಜನಪ್ರತಿನಿಧಿಗಳು ಮೌನಕ್ಕೆ ಜಾರಿ, ಜಾಣ ಕುರುಡು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜನರ ನೋವಿಗೆ ಸ್ಪಂದಿಸದಿದ್ದರೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.

ಅಭ್ಯರ್ಥಿಗಳ ಮುಖಂಡ ರವಿಶಂಕರ್ ಮಾಲಿ ಪಾಟೀಲ ಮಾತನಾಡಿ, ರಾಜ್ಯದಲ್ಲಿ 20 ಲಕ್ಷ
ಅಭ್ಯರ್ಥಿಗಳು ಸ್ಪರ್ಧಾಕಾಂಕ್ಷಿಗಳಿದ್ದು, ಕೆಪಿಎಸ್ಸಿ, ಕೆ ಇ ಎ, ಕೆಪಿಟಿಸಿಎಲ್, ಪಿ ಡಬ್ಲ್ಯೂ ಡಿ, ಸಹಾಯಕ ಪ್ರೋಫೆಸರ್, ಶಿಕ್ಷಕರ ನೇಮಕಾತಿ ಹೀಗೆ ಸಾಲು ಸಾಲು ಅಕ್ರಮ ನಡೆದಿವೆ.

ಸಿಐಡಿ ತನಿಖೆಗೆ ನೀಡಿದ ನಂತರ ಸಾಕಷ್ಟು ಸಾಕ್ಷ್ಯ ನಾಶಮಾಡಲಾಗಿದೆ.
ಸಾಕ್ಷ್ಯಾಧಾರ ಕೊಟ್ಟರೂ ಭ್ರಷ್ಟಾಚಾರದ ಬಗ್ಗೆ ಸರಕಾರ ಮೌನ ಮುರಿಯದಿರುವುದು ಬೇಸರದ ಸಂಗತಿ ಎಂದರು‌.

ಈ ಪ್ರತಿಭಟನೆಯಲ್ಲಿ ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಮುಖಂಡರಾದ ಶಿವಶರಣು, ವಿನೋದ ಶೆಟ್ಟಿ, ಕುರವೆತ್ತಪ್ಪ, ಖಾಸಗಿ ಲೈಬ್ರರಿ
ಸಂಘಟನೆಯ ಅಧ್ಯಕ್ಷ ರವೀಂದ್ರ ಕಮಲದಿನ್ನಿ, ಅರುಣ, ಚೇತನ, ಹನುಮಂತ ಪೋತನಾಳ, ಮಲ್ಲು ಸೇಡಂ, ಸುರೇಶ್, ದತ್ತು, ಶ್ರೀಶೈಲ ಪಾಟೀಲ, ಭದ್ರಗೌಡ ಮಾಲಿಪಾಟೀಲ್,
ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜ ಗೌರಿ ಸೇರಿದಂತೆ ಅನೇಕ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಬಳಿಕ ಅಪರ್ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *