ರಾಜ್ಯ

ರಾಜ್ಯದಲ್ಲಿ ಪಟಾಕಿ ನಿಷೇಧ; ಸಂಕಷ್ಟದಲ್ಲಿ ಮಾರಾಟಗಾರರು

ಮಂಜುನಾಥ ಎಸ್. ರಾಠೋಡ

ಗದಗ prajakiran.com : ಕೋವಿಡ್-೧೯ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ನಿಷೇಧ ನಿರ್ಧಾರ ಪಟಾಕಿ ವ್ಯಾಪಾರಿಗಳಿಗೆ ಶಾಕ್ ನೀಡಿದೆ.

ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಬಾಕಿ ಇರುವಾಗ ಸರ್ಕಾರ ಪ್ರಕಟಿಸಿರುವ ನಿರ್ಣಯ ಈಗ ವ್ಯಾಪಾರಕ್ಕಾಗಿ ಬಂಡವಾಳ ಹಾಕಿರುವ ಮಾಲೀಕರನ್ನು ಕಂಗಾಲಾಗಿಸಿದೆ. ಪಟಾಕಿ ವ್ಯಾಪಾರಕ್ಕಾಗಿಯೇ ಹಲವರು ಸಾಲ ಮಾಡಿ ಬಂಡವಾಳ ಹಾಕಿದ್ದು, ಸಾಲದ ಶೂಲಕ್ಕೆ ಸಿಲುಕಿದಂತಾಗಿದೆ.

ದೆಹಲಿ, ಮಹಾರಾಷ್ಟ್ರ ಬೆನ್ನಲ್ಲೇ ಕರ್ನಾಟಕದಲ್ಲೂ ಪಟಾಕಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದ್ದು, ರಾಜ್ಯ ಸರ್ಕಾರದ  ಆದೇಶದಿಂದ ವ್ಯಾಪಾರಸ್ಥರು ಕಂಗಲಾಗಿದ್ದಾರೆ.  

 ಹೋಂ ಐಸೋಲೇಷನ್‌ನಲ್ಲಿರುವ ಕೋವಿಡ್ ರೋಗಿಗಳಿಗೆ ಪಟಾಕಿ ಹೊಗೆಯಿಂದ ಹಾಗೂ ಅದು ಸೃಷ್ಟಿಸುವ ವಾಯು ಮಾಲಿನ್ಯದಿಂದ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಸೋಂಕಿತರ ಆರೋಗ್ಯ ದೃಷ್ಟಿಯಿಂದ ತಜ್ಞರು ನೀಡಿದ ಸಲಹೆ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ. ಸರ್ಕಾರದ ಆದೇಶದ ವಿರುದ್ಧ ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟಾಕಿ ಮಾರಾಟ ನಿಷೇಧದ ಸರ್ಕಾರದ ಚಿಂತನೆ ಸರಿ ಇರಬಹುದು. ಆದರೆ, ತನ್ನ ನಿರ್ಧಾರ ಘೋಷಿಸಲು ವಿಳಂಬ ಮಾಡಿರುವುದು ಇದೀಗ ಪಟಾಕಿ ಅಂಗಡಿ ವರ್ತಕರಿಗೆ ಆಘಾತ ತಂದಿದೆ.

ದೀಪಾವಳಿ ಹಬ್ಬಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ವ್ಯಾಪಾರ- ವಹಿವಾಟಿಗಾಗಿ ವರ್ತಕರು ಈಗಾಗಲೇ ಲಕ್ಷಾಂತರ ರೂ.ಬಂಡವಾಳ ಹಾಕಿ ಬಗೆ ಬಗೆಯ ಪಟಾಕಿ ದಾಸ್ತಾನು ಮಾಡಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಸಿಡಿಮದ್ದು ನಿಷೇಧಿಸಿರುವುದು ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

“ಶಿವಕಾಶಿಯಿಂದ ತಂದಿರುವ ಹಾಗೂ ಸದ್ಯದಲ್ಲಿಯೇ ಬರಲಿರುವ ಪಟಾಕಿಯನ್ನು ಸ್ಥಳೀಯವಾಗಿ ಮಾರಾಟ ಮಾಡುವಂತಿಲ್ಲ. ಶಿವಕಾಶಿಗೆ ವಾಪಸ್ ಕಳುಹಿಸುವಂತಿಲ್ಲ. ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ಶೆಡ್ ಹಾಕಿಕೊಂಡು ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ಧೇವೆ.

ಶಿವಕಾಶಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ತರಿಸಲಾಗಿದೆ. ಪಟಾಕಿ ಮಾರಾಟವಾಗದಿದ್ದರೆ ಅದರ ನಷ್ಟವನ್ನು ಸರ್ಕಾರವೇ ಭರಿಸಬೇಕು” ಎಂದು ಪಟಾಕಿ ಮಾರಾಟಗಾರ ಕೆ.ಸತೀಶ ಅಳಲು ತೋಡಿಕೊಂಡರು.

ಗದಗ ಜಿಲ್ಲೆಯಲ್ಲಿ ಪ್ರತಿ ವರ್ಷ ೭೦ಕ್ಕೂ ಹೆಚ್ಚು ಪಟಾಕಿ ಅಂಗಡಿಗಳು ತಲೆ ಎತ್ತುತ್ತವೆ. ಪ್ರತಿ ವರ್ಷ ೨ ಕೋಟಿ ರೂ. ಗಳಿಗೂ ಹೆಚ್ಚು ವಹಿವಾಟು ನಡೆಯುತ್ತದೆ.

ಈ ಬಾರಿಯೂ ವರ್ತಕರು ಕರೋನಾ ಆತಂಕದ ಅನುಮಾನ ನಡುವೆ ಸಾಲಶೂಲಮಾಡಿ ಶೇ. ೫೦ ಪಟಾಕಿ ಈಗಾಗಲೇ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ಲ ನಗರಸಭೆ, ಅಗ್ನಿ ಶಾಮಕ ದಳಕ್ಕೆ ನಿಗದಿತ ಶುಲ್ಕ ಪಾವತಿಸಿ ಪರವಾನಗಿ ಪಡೆದಿದ್ದಾರೆ. ದೀಪಾವಳಿ ಜತೆಗೆ ಬರುವ ಕ್ರಿಸ್‌ಮಸ್, ಹೊಸ ವರ್ಷದಸಂಭ್ರಮಾಚರಣೆ ವೇಳೆ ವ್ಯಾಪಾರ ಮಾಡುವ ಆಶಯ ವರ್ತಕರದ್ದಾಗಿದೆ.

ಪರಿಸರ ಮಾಲಿನ್ಯಕ್ಕೆ ಧಕ್ಕೆ ಹಿನ್ನೆಲೆ ಸಿಡಿಮದ್ದುಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವುದರಿಂದ ಪಟಾಕಿ ಮಾರಾಟ ಪ್ರಮಾಣ ಈಗಾಗಲೇ ಕುಸಿತ ಕಂಡಿದ್ದು, ನಂತರ ಕೋವಿಡ್‌ನಿಂದಾಗಿ ಮತ್ತಷ್ಟು ಪರಿಣಾಮ ಬೀರಿತ್ತು.

ಇನ್ನೇನು ಅಂಗಡಿ ತೆರೆಯುವ ಸಿದ್ಧತೆಯಲ್ಲಿರುವ ಸಂದರ್ಭದಲ್ಲಿ ಈಗ ಪಟಾಕಿಯನ್ನೇ ನಿಷೇಧಿಸಲಾಗಿದೆ.

ವ್ಯಾಪಾರಕ್ಕಾಗಿ ಸಾಲ ಮಾಡಿ, ಚಿನ್ನಾಭರಣ ಅಡವಿಟ್ಟು ಪಟಾಕಿ ಸ್ಟಾಕ್ ಮಾಡಿಕೊಂಡಿದ್ದವರಿಗೆ, ಈಗಾಗಲೇ ನಷ್ಟದಲ್ಲಿರುವ ವರ್ತಕರು ಬೀದಿಗೆ ಬರುವಂತಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *