ರಾಜ್ಯ

ಧಾರವಾಡದ ಕೆ ಐ ಎ ಡಿ ಬಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ರೈತರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ : ಸಿಬಿಐ ತನಿಖೆಗೆ ಬಸವರಾಜ ಕೊರವರ ಒತ್ತಾಯ

ಧಾರವಾಡ ಪ್ರಜಾಕಿರಣ. ಕಾಮ್ : ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಧಾರವಾಡ ಕಚೇರಿಯಲ್ಲಿ ವಿವಿಧ ಖೊಟ್ಟಿ ದಾಖಲೆ ಸೃಷ್ಟಿಸಿ ರೈತರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಎಸಗಲಾಗಿದ್ದು, ಈ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಒತ್ತಾಯಿಸಿದರು.

2012ರಲ್ಲಿ ಹತ್ತಕ್ಕೂ ಹೆಚ್ಚು ರೈತರಿಗೆ ಪರಿಹಾರ ನೀಡಲಾಗಿದೆ. ಮತ್ತೇ 2022ರಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ 21 ಕೋಟಿ ೧14 ಲಕ್ಷ 78 ಸಾವಿರ, 468 ರೂಪಾಯಿ ಮೊತ್ತವನ್ನು ಎರಡನೇ ಬಾರಿಗೆ ಆರ್ ಟಿ ಜಿ ಎಸ್ ಮಾಡಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸುಮಾರು ಒಂದುನೂರು ಕೋಟಿಗೂ ಅಧಿಕ ಅಕ್ರಮ ಹಾಗೂ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎಂಬ ಬಲವಾದ ಅನುಮಾನ ನಮಗೆ ಕಾಡುತ್ತಿದೆ ಎಂದರು.

ಈಗಾಗಲೇ ನಮಗೆ ಲಭಿಸಿರುವ ಮಾಹಿತಿಗಳ ಪ್ರಕಾರ ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ ಅವರ ಅವಧಿಯಲ್ಲಿ ಎಪ್ರಿಲ್ ೨೦೨೧ರಿಂದ ಎಪ್ರಿಲ್ ೨೦೨೨ರ ವರೆಗೆ ಅಂದಾಜು ೧೪೦ ಕೋಟಿ ಅನುದಾನ ಬಿಡುಗಡೆ ಆಗಿದೆ.

ಹೀಗಾಗಿ ಇದರಲ್ಲಿ ಹಿರಿಯ ಅಧಿಕಾರಿಗಳಾದ ಸಿಇಒ ಎನ್. ಶಿವಶಂಕರ್ ಐ ಎ ಎಸ್,
ಕೈಗಾರಿಕೆ ಸಚಿವರ ಆಪ್ತ
ದಯಾನಂದ ಬಂಡಾರಿ ಕೆ ಎ ಎಸ್ ಹಾಗೂ ಎಸಿ ಗ್ರೇಡ್ ಅಧಿಕಾರಿ ದೊರೆಸ್ವಾಮಿ, ವಿಶೇಷ ಭೂ ಸ್ವಾಧೀನಧಿಕಾರಿ ವಿ.ಡಿ. ಸಜ್ಜನ, ವ್ಯವಸ್ಥಾಪಕರಾದ ಶಂಕರ ತಳವಾರ, ಶಿಂಪಿ, ದ್ವಿತೀಯ ದರ್ಜೆ ಸಹಾಯಕ ಅಮಿತ ಮುದ್ದಿ, ಜವಾನ ರಾಜು ಹೆಬ್ಬಳ್ಳಿ ಅವರು ಶಾಮೀಲು ಆಗಿರುವ ಸಾಧ್ಯತೆಗಳಿವೆ ಎಂದು ಹೇಳಿದರು.

ಜೊತೆಗೆ ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡದಿದ್ದರೆ ಇಷ್ಟೊಂದು ಮೊತ್ತದ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಆದ ಕೋಟ್ಯಾಂತರ ರೂಪಾಯಿ ಅವರಿಂದ ಮರು ವಸೂಲಿ ಮಾಡುವ ಜೊತೆಗೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ಇದನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ ನಿರಾಣಿ ಅವರ ಮೂಲಕ ವಿನಂತಿಸುತ್ತೇವೆ ಎಂದು ತಿಳಿಸಿದರು.

ನಮಗೆ ಲಭಿಸಿರುವ ದಾಖಲಾತಿ ಮಾಹಿತಿಗಳ ಪ್ರಕಾರ ಧಾರವಾಡದ ವಿಶೇಷ ಭೂ ಸ್ವಾಧೀನಧಿಕಾರಿ ವಿ.ಡಿ. ಸಜ್ಜನ ಅವರ ವಿರುದ್ದ ಅಕ್ಕಮ್ಮ ಪೂಜಾರ ಅವರ ಖೊಟ್ಟಿ ದಾಖಲೆ ಸೃಷ್ಟಿಸಿದಕ್ಕಾಗಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಸರಕಾರದ ಹಣವನ್ನು ದೋಚಿರುವ ಹಿಂದೆ ಐಡಿಬಿಐ ಬ್ಯಾಂಕ್, ಹುಬ್ಬಳ್ಳಿ ಶಾಖೆ ಹಾಗೂ ಬ್ಯಾಂಕ್ ಆಫ್ ಬರೋಡಾ ಕೋಟುರ ಶಾಖೆಯ ಅಧಿಕಾರಿಗಳು ಹಾಗೂ ಕೆ ಐ ಎ ಡಿ ಬಿ ಸಿಬ್ಬಂದಿಗಳು ಸಹ ಈ ಒಂದು ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದರು.

ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಮಿಥುನ್ ಜಾಧವ್, ವಕೀಲರಾದ ಐ.ಕೆ. ಧರಣಗೌಡರ, ರೈತ ಮುಖಂಡ ಗುರು ಅಂಗಡಿ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಯುವ ಮುಖಂಡ ಸುರೇಶ್ ಕೋರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *