ಅಂತಾರಾಷ್ಟ್ರೀಯ

ದೆಹಲಿ ರೈತರ ಹೋರಾಟ ಬೆಂಬಲಿಸಿ ಧಾರವಾಡದಲ್ಲಿ ಟ್ರ‍್ಯಾಕ್ಟರ್ ಜಾಥಾ

ಧಾರವಾಡ prajakiran.com : ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ನಿರತ ರೈತರ ಹೋರಾಟ ಬೆಂಬಲಿಸಿ ಹಾಗೂ ರೈತ ಹೋರಾಟದಲ್ಲಿ ಅಸುನೀಗಿದ ೬೦ ರೈತರ ಸ್ಮರಣಾರ್ಥ ರೈತ ಹಿತರಕ್ಷಣಾ ಪರಿವಾರದ ವತಿಯಿಂದ ಧಾರವಾಡದಲ್ಲಿ ಟ್ರ‍್ಯಾಕ್ಟರ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ನೂರಾರು ರೈತರು ಟ್ರ‍್ಯಾಕ್ಟರ್ ಸಮೇತ ರಸ್ತೆಗಳಿದರೆ, ಅವರಿಗೆ ಬೆಂಬಲ ಸೂಚಿಸಿ, ವಿವಿಧ ರೈತ ಸಂಘಟನೆಗಳ ಹೋರಾಟಗಾರರು, ರೈತ ಚಿಂತಕರು, ಕಾಂಗ್ರೆಸ್, ಜೆಡಿಎಸ್ ಮತ್ತು ಎಡಪಂಥೀಯ ಸಂಘಟನೆಗಳ ಮುಖಂಡರು ಸಾಥ್ ನೀಡಿದ್ದು ವಿಶೇಷವಾಗಿತ್ತು.

ಧಾರವಾಡದ ಕಲಾಭವನದಿಂದ ಆರಂಭಗೊಂಡ ಟ್ರ‍್ಯಾಕ್ಟರ್ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ರೈತ ಹೋರಾಟ ೧೯೮೦-೯೦ ದಶಕದಲ್ಲಿನ ರೈತರ ಹೋರಾಟ ನೆನಪಿಸಿತು.

ಧಾರವಾಡದಲ್ಲಿ ಶನಿವಾರ ಟ್ರ‍್ಯಾಕ್ಟರ್ ಮೆರವಣಿಗೆ ಮಾಡುವ ಮೂಲಕ ನೂರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಧಾರವಾಡದ ಕಲಾಭವನದಿಂದ ಆರಂಭವಾದ ಈ ಟ್ರ‍್ಯಾಕ್ಟರ್ ಮೆರವಣಿಗೆ ವಿವೇಕಾನಂದ ವೃತ್ತದ ಮೂಲಕ ಹಾಯ್ದು ಮರಳಿ ಕಲಾಭವನಕ್ಕೆ ಬಂದು ಮುಕ್ತಾಯಗೊಂಡಿತು.

ಈ ವೇಳೆ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಘೋಷಣೆ ಕೂಗಿದಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.

ಹಿರಿಯರೈತ ಹೋರಾಟಗಾರರು ಆಗಿರುವ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ನಿಲುವಿನಿಂದ ತಕ್ಷಣ ಹಿಂದಕ್ಕೆ ಸರಿಯಬೇಕು. ಮೊಂಡು ಹಠಕ್ಕೆ ಬಿದ್ದಿರುವುದು ನೋವಿನ ಸಂಗತಿಯಾಗಿದೆ.

ದೇಶ ಮೊದಲು ಎನ್ನುವರು ನಡೆದುಕೊಳ್ಳುವ ಪರಿ ಇದಲ್ಲ. ಅನ್ನದಾತ ಇದ್ದರೆ ದೇಶ. ದೇಶಕ್ಕೆ ಅನ್ನ ನೀಡುವವರೇ ಇಲ್ಲ ಎಂದರೆ ದೇಶ ಎಲ್ಲಿರುತ್ತದೆ ಎಂಬುದನ್ನು ಆಳುವವರು ಅರಿತುಕೊಳ್ಳಬೇಕು ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾತನಾಡಿ, ದೆಹಲಿಯಲ್ಲಿ ೪೬ ದಿನಗಳಿಂದ ರೈತರು ಮೂರುಡಿಗ್ರಿ ಉಷ್ಣಾಂಶವನ್ನು ಲೆಕ್ಕಿಸದೆ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ ಕೇಂದ್ರದ ಬಿಜೆಪಿ ಸರಕಾರ ಖ್ಯಾರೆ ಎನ್ನದಿರುವುದು ದುರಂತದ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಕೆಲವೇ ಕೆಲವು ಕಂಪನಿಗಳ ಪರ ನಿಂತಿರುವ ಮೋದಿ ಸರಕಾರದ ನಡೆ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನವಿರೋಧಿಯಾಗಿದೆ. ಇದು ದೇಶದ ಬೆಳವಣಿಗೆ ದೃಷ್ಟಿಯಿಂದ ಸರಿಯಲ್ಲ ಎಂದರು.

ಈ ಸಂದರ್ಭದಲ್ಲಿ ಭಾಷಾ ತಜ್ಞ ಜಿ.ಎನ್. ಗಣೇಶದೇವಿ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಗುರುರಾಜ ಹುಣಸಿಮರದ, ಗಂಗಾಧರ ಪಾಟೀಲ ಕುಲಕರ್ಣಿ,ಶಿವಾನಂದ ಹೊಳೆಹಡಗಗಲಿ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಸಿದ್ದಪ್ಪ ಕಂಬಾರ, ಉಳವಪ್ಪ ಒಡೆಯರ, ಭೀಮಪ್ಪ ಕಾಸಾಯಿ, ಅಶ್ರಫ ಅಲಿ, ಬಾಬಾಜಾನ ಮುಧೋಳ, ಕಿರಣ ಮೂಗಬಸವ, ಪ್ರಕಾಶಗೌಡ ಪಾಟೀಲ, ಮುತ್ತಣ್ಣ ಶಿವಳ್ಳಿ,ಸದಾನಂದ ಕುಲಕರ್ಣಿ, ನಿಂಗರಾಜ ಹಡಪದ, ಬಸವರಾಜ ಮಲಕಾರಿ, ಬಾಳಪ್ಪ ಅಬ್ಬಾರ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *