ರಾಜ್ಯ

ಧಾರವಾಡ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣ : ಎಸಿಪಿ, ಇನ್ಸಪೆಕ್ಟರ್ ಸೇರಿ 6 ಜನರ ವಿಚಾರಣೆ

ಬೆಂಗಳೂರು prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಧಾರವಾಡ ಎಸಿಪಿ ಹಾಗೂ ಸದ್ಯ ಗದಗ ಎಸಿಬಿ ಡಿವೈಎಸ್ಪಿ ಆಗಿರುವ ವಾಸುದೇವ ನಾಯ್ಕ, ಅಂದಿನ ಉಪನಗರ ಪೊಲೀಸ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ್ ಸೇರಿ ಆರು ಜನ ಪೊಲೀಸರ ವಿಚಾರಣೆಯನ್ನು ಸಿಬಿಐ ಅಧಿಕಾರಿಗಳ ತಂಡ ನಡೆಸಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ವಿಚಾರಣೆ ಆರಂಭಿಸಿ ರಾತ್ರಿಯವರೆಗೆ ವಿಚಾರಣೆ ನಡೆಸಿದರು ಎಂದು ಗೊತ್ತಾಗಿದೆ.




2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ ಜಿಮ್ ನಲ್ಲಿ ಬೆಳ್ಳಂ ಬೆಳಗ್ಗೆ ಯೋಗೀಶಗೌಡ ಗೌಡರನ್ನು ಖಾರದ ಪುಡಿ ಎರಚಿ,  ಮಾರಕಾಸ್ತ್ರಗಳಿಂದ  ಕೊಚ್ಚಿ ಕೊಲೆ ಮಾಡಲಾಗಿತ್ತು.

ಆದರೆ ಅಂದಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ಕೈಗೊಂಡಿರಲಿಲ್ಲ.

ಹೀಗಾಗಿ ನೈಜ 8 ಕೊಲೆ ಆರೋಪಿಗಳನ್ನು ಬಿಟ್ಟು ಬೇರೆಯವರನ್ನು ಬಂಧಿಸಲಾಗಿತ್ತು ಎಂಬ ಗಂಭೀರ ಆಪಾದನೆಗಳ ಹಿನ್ನಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಿದರು ಎನ್ನಲಾಗಿದೆ.




ಅಲ್ಲದೆ, ಕೊಲೆಯಾದ ಸ್ಥಳದಲ್ಲಿಯ ಸಿಸಿ ಟಿವಿ ಕ್ಯಾಮರಾ ಹಾಗೂ ಘಟನಾ ಸ್ಥಳದಲ್ಲಿದ್ದ ಸಾಕ್ಷ್ಯಗಳ ಹೊರತಾಗಿಯೂ ಶರಣಾದ ಆರು ಆರೋಪಿಗಳನ್ನು ಬಂಧಿಸಿದ್ದು ಏಕೆ, ನಿಜವಾದ ಕೊಲೆ ಆರೋಪಿಗಳನ್ನು ಬಂಧಿಸಲು ಏಕೆ ಪ್ರಯತ್ನಿಸಲಿಲ್ಲ.

ಪೊಲೀಸ್ ತನಿಖೆ ದಾರಿ ತಪ್ಪಿದ್ದು ಏಕೆ, ಯಾರ ಅಣತಿಯಂತೆ ಪೊಲೀಸರು ತನಿಖೆ ಕೈಗೊಂಡರು ಎಂಬುದರ ನಿಟ್ಟಿನಲ್ಲಿ ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.




ಈ ಹಿಂದೆ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಜೀನೇಂದ್ರ ಖಣಗಾವಿ, ಧಾರವಾಡ ಎಸಿಪಿ ವಾಸುದೇವ ನಾಯ್ಕ, ಉಪನಗರ ಪೊಲೀಸ ಠಾಣೆ ಇನ್ಸಪೆಕ್ಟರ್ ಚನ್ನಕೇಶವ ಟಿಂಗರೀಕರ್ ಹಾಗೂ ಮೋತಿಲಾಲ್ ಪವಾರ್, ಹೆಡ್ ಕಾನ್ಸಟೇಬಲ್ ಗಳಾದ ಬಾಬು ಕಟಗಿ, ಶಂಕರಗೌಡ ಪಾಟೀಲ, ತೋಸಿಫ್ ದಾವಲ್ ಸೇರಿ ಹತ್ತಾರು ಪೊಲೀಸರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.

ಇದಲ್ಲದೆ  ರಾಜೀ ಸಂಧಾನಕ್ಕೆ ಯತ್ನಿಸಿದ ಆರೋಪದ ಹಿನ್ನಲೆಯಲ್ಲಿ  ಡಿವೈಎಸ್ಪಿಗಳಾದ ತುಳಜಪ್ಪ ಸುಲ್ಫೀ, ಬಿ.ಪಿ. ಚಂದ್ರಶೇಖರ ಅವರನ್ನು ಕೂಡ ವಿಚಾರಣೆ ನಡೆಸಿ, ಹೇಳಿಕೆ ಪಡೆದಿದ್ದರು.




ಯೋಗಿಶಗೌಡ ಗೌಡರ ಕೊಲೆಯಾದ ಹದಿನೈದು ಇಪ್ಪತ್ತು ದಿನಗಳಲ್ಲಿಯೇ ಅಂದಿನ ಕಾಂಗ್ರೆಸ್ ಸರಕಾರ ಧಾರವಾಡದ ಮೂವರು ಪೊಲೀಸ್ ಇನ್ಸಪೆಕ್ಟರ್ ಗಳ ವರ್ಗಾವಣೆ ಮಾಡಿತ್ತು.

ಹೀಗಾಗಿ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಚನ್ನಕೇಶವ ಟಿಂಗರೀಕರ್ ಅವರ ಸ್ಥಳಕ್ಕೆ ಮೋತಿಲಾಲ್ ಪವಾರ್ ಆಗಮಿಸಿದ್ದರು.




ಟಿಂಗರೀಕರ್ ಅವರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರೆ, ಮೋತಿಲಾಲ್ ಪವಾರ್ ತನಿಖೆ ಮುಂದುವರೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

ಹೀಗಾಗಿ ಇವರಿಬ್ಬರು ಪೊಲೀಸ್ ಅಧಿಕಾರಿಗಳು ಯಾರ ಅಣತಿಯಂತೆ ತನಿಖೆ ಕೈಗೊಂಡಿದ್ದರು.




 ಅಂದಿನ ಪ್ರಭಾವಿ ರಾಜಕಾರಣಿಗಳ, ಪೊಲೀಸ್ ಆಯುಕ್ತ, ಡಿಸಿಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಒತ್ತಡವಿತ್ತೇ ಎಂಬುದರ ಕುರಿತು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.  

ಇದೀಗ ಮತ್ತೊಮ್ಮೆ ಅವರನ್ನು ಬೆಂಗಳೂರಿನ ಸಿಬಿಐ ಕಚೇರಿಗೆ ಕರೆಯಿಸಿ ಹೇಳಿಕೆ ಪಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *