ರಾಜ್ಯ

ಧಾರವಾಡ ಹೈಕೋರ್ಟ್ ಸರ್ಕಾರಿ ವಕೀಲರ ನೇಮಕದಲ್ಲಿಉತ್ತರ ಕರ್ನಾಟಕಕ್ಕೆ ತಾರತಮ್ಯ

ಧಾರವಾಡ prajakiran.com : ಉತ್ತರ ಕರ್ನಾಟಕದ ಬಹುದಿನದ ಕನಸಾಗಿ ಧಾರವಾಡದಲ್ಲಿ ಉಚ್ಚ ನ್ಯಾಯಾಲಯದ ಪೀಠ ಆರಂಭವಾಗಿ ದಶಕಗಳೇ ಕಳೆದರೂ ಸರ್ಕಾರವು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮತ್ತು ತಾರತಮ್ಯ ಮಾಡುವುದನ್ನು ಮುಂದುವರೆಸಿರುವುದು ಸ್ಪಷ್ಟವಾಗುತ್ತಿದೆ.

ಧಾರವಾಡದ ಉಚ್ಚ ನ್ಯಾಯಾಲಯದ ಪೀಠದಲ್ಲಿ ಎರಡು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಹುದ್ದೆಗಳಿವೆ. ಅದರಲ್ಲಿ ಒಂದು ಹುದ್ದೆಗೆ ಬೆಂಗಳೂರಿನ ವೃತ್ತಿನಿರತ ವಕೀಲರಾದ ಧ್ಯಾನ್‌ ಪೂಣಚ್ಚ ಅವರನ್ನು ಸರ್ಕಾರ ನೇಮಿಸಿದೆ.

ಧ್ಯಾನ್‌ ಪೂಣಚ್ಚ ಅವರು ಬೆಂಗಳೂರಿನಲ್ಲಿಯೇ ವೃತ್ತಿ ನಡೆಸುತ್ತಿದ್ದು ಧಾರವಾಡ ಪೀಠದಲ್ಲಿ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಹುದ್ದೆಯನ್ನು ಸ್ವೀಕರಿಸಿ ಒಂದು ವರ್ಷವಾರೂ ಧಾರವಾಡಕ್ಕೆ ಸ್ಥಳಾಂತರಗೊಂಡಿಲ್ಲ ಮತ್ತು ಧಾರವಾಡ ಪೀಠದ ಎದುರು ತಮ್ಮ ವಾದವನ್ನು ಮಂಡಿಸಲು ಹಾಜರಾಗಿಯೂ ಇಲ್ಲ.

ಇದೀಗ ಧಾರವಾಡ ಉಚ್ಚ ನ್ಯಾಯಾಲಯ ಪೀಠದಲ್ಲಿ ಖಾಲಿ ಇದ್ದ ಎರಡು ಅಪರ ಸರ್ಕಾರಿ ವಕೀಲರ ಹುದ್ದೆಗೆ ಆ 8 ರಂದು ಬೆಂಗಳೂರಿನಲ್ಲಿ ವೃತ್ತಿ ನಿರತ ವಕೀಲರನ್ನು ನೇಮಿಸಿ ಸರ್ಕಾರ ಆಘಾತಕಾರಿ ಆದೇಶ ಹೊರಡಿಸಿದೆ.

ನಂತರ ಆ. ೧೦ ರಂದು ಅಡ್ವೋಕೇಟ್‌ ಜನರಲ್‌ ಅವರು ಅಧಿಸೂಚನೆ ಮೂಲಕ ಧಾರವಾಡ ಪೀಠಕ್ಕೆ ನೇಮಕವಾದ ಬೆಂಗಳೂರಿನ ವಕೀಲರಿಗೆ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿಯೇ ಕಾರ್ಯಭಾರ ನಿಗದಿಪಡಿಸಿದ್ದಾರೆ.

ಅಂದರೆ ಈ ನೇಮಕಗಳು ಹೆಸರಿಗೆ ಮಾತ್ರ ಧಾರವಾಡ ಪೀಠಕ್ಕೆ ಅಂತಾಗಿದೆ. ಧಾರವಾಡ ಪೀಠದ ಹೆಸರಿನಲ್ಲಿ ಬೆಂಗಳೂರಿನ ವಕೀಲರಿಗೆ ಮಣೆ ಹಾಕುತ್ತಿರುವುದು ಖಂಡನೀಯವಾಗಿದೆ.

ಇದರಿಂದಾಗಿ ಒಬ್ಬರು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌, ಇಬ್ಬರು ಅಪರ ಸರ್ಕಾರಿ ವಕೀಲರು ಧಾರವಾಡ ಪೀಠಕ್ಕೆ ನೇಮಕಗೊಂಡು ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ.

ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಅನೇಕ ಅರ್ಹ, ಸಮರ್ಥ  ಮತ್ತು ಪ್ರತಿಭಾವಂತ ವಕೀಲರಿದ್ದರೂ ಬೆಂಗಳೂರಿಗರಿಗೆ ಮಣೆ ಹಾಕುತ್ತಿರುವ ಸರ್ಕಾರದ ನಡೆ ತೀವ್ರ ಖಂಡನೀಯವಾಗಿದೆ.

ಇದು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದಂತಾಗಿದೆ. ಧಾರವಾಡ ಪೀಠದಲ್ಲಿ ಖಾಲಿ ಇರುವ ಹುದ್ದೆಗೆ ಧಾರವಾಡದಲ್ಲಿಯೇ ಅರ್ಹ ಮತ್ತು ಸಮರ್ಥ ವಕೀಲರುಗಳು ಸರ್ಕಾರಕ್ಕೆ ಸಿಗಲಿಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಬೇಕಾಗಿದೆ. 

ಅಲ್ಲದೇ ಧಾರವಾಡ ಪೀಠವು ಸರ್ಕಾರಿ ವಕೀಲರ ಕೊರತೆಯನ್ನು ಅನುಭವಿಸುತ್ತಿದೆ. ಇದು ಧಾರವಾಡಕ್ಕೆ ಮತ್ತು ಸಮಗ್ರ ಉತ್ತರ ಕರ್ನಾಟಕಕ್ಕೆ ಸರ್ಕಾರ ಮಾಡುತ್ತಿರುವ ಅನ್ಯಾಯ ಎಂದು ಬಲವಾಗಿ ಖಂಡಿಸುತ್ತೇನೆ ಎಂದು ರಾಜ್ಯ ಬಾರ್‌ ಕೌನ್ಸಿಲ್‌ ಸದಸ್ಯ ವಿ.ಡಿ. ಕಾಮರಡ್ಡಿ ಎಂದು ತಿಳಿಸಿದ್ದಾರೆ.

ಈ ಆದೇಶಗಳನ್ನು ತಕ್ಷಣ ಹಿಂಪಡೆದು ಧಾರವಾಡ ಪೀಠದಲ್ಲಿರುವ ಎಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಧಾರವಾಡದಲ್ಲಿ ವೃತ್ತಿ ನಿರತರಾಗಿವರನ್ನೇ ನೇಮಿಸಬೇಕು ಮತ್ತು ಧಾರವಾಡ ಪೀಠಕ್ಕೆ ನೇಮಕಗೊಂಡ ಸರ್ಕಾರಿ ವಕೀಲರುಗಳು ಧಾರವಾಡದಲ್ಲಿಯೇ ಕಾರ್ಯ ನಿರ್ವಹಿಸುವಂತಾಗಬೇಕು.

ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮಂತ್ರಿಗಳು, ಕಾನೂನು ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಅಡ್ವೋಕೇಟ್‌ ಜನರಲ್‌, ಸ್ಥಳೀಯ ಶಾಸಕರುಗಳು ಮತ್ತು ಸಂಸದರಿಗೆ ಪ್ರತಿಭಟನಾ ಪತ್ರವನ್ನು ಅವರು ಬರೆದಿರುವುದಾಗಿ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *