ರಾಜ್ಯ

ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಿಷೇಧ

ಧಾರವಾಡ prajakiran.com  :  ಕೋರೊನಾ ಎಲ್ಲೆಡೆ ಹೆಚ್ಚುತ್ತಿರುವದರಿಂದ ಸರಕಾರ ಬರುವ ಗಣೇಶ ಚತುರ್ಥಿ ಹಬ್ಬವನ್ನು ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಆಚರಿಸುವುದನ್ನು ಮತ್ತು ಪಿಓಪಿ ಗಣೇಶ ವಿಗ್ರಹಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿಯೇ ಮಣ್ಣಿನ ಅಥವಾ ಅರಿಶಿಣದಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಗಜಾನನ ಮಹಾಮಂಡಳ, ಕಲಾವಿದರ ಮತ್ತು ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.

ಪರಿಸರ ಹಾನಿಕಾರಕ ಪಿಓಪಿ ಗಣಪತಿ ವಿಗ್ರಹಗಳ ಮಾರಾಟ ಮತ್ತು ಬಳಕೆಯನ್ನು ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ.

ಮಣ್ಣಿನ ಹಾಗೂ ಅರಿಶಿಣದಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಮಾತ್ರ ಬಳಸಿ, ಪೂಜಿಸಬೇಕು. ಯಾರಾದರೂ ಪಿಓಪಿ ಗಣೇಶ ಮೂರ್ತಿಗಳ ಸಂಗ್ರಹ ಅಥವಾ ಮಾರಾಟ ಮಾಡುವುದು ಕಂಡು ಬಂದರೆ ಪೊಲಿಸ್ ಅಥವಾ ಮಹಾನಗರ ಪಾಲಿಕೆ ಸಹಾಯವಾಣಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದರು.

ನಾಳೆಯಿಂದ ಪರಿಸರ ಇಲಾಖೆ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪಿಓಪಿ ಗಣಪತಿ ಮೂರ್ತಿಗಳ ಸಂಗ್ರಹ, ಮಾರಾಟ ಕುರಿತು ಪರಿಶೀಲನೆ ನಡೆಸಿ, ಪಿಓಪಿ ಜಪ್ತಿ ಮಾಡಲಿದ್ದಾರೆ. ಮತ್ತು ಅನುಮತಿ ಇಲ್ಲದೆ ಸಂಗ್ರಹ ಅಥವಾ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಧ್ವನಿವರ್ಧಕ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಮನೆಗಳಲ್ಲಿಯೆ ಗಣೇಶ ಪ್ರತಿಷ್ಠಾಪಿಸಿ, ಆರಾಧಿಸಿ. ಅಗತ್ಯವಿದ್ದರೆ ಮಾತ್ರ ದೇವಸ್ಥಾನಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ.

ಅಲ್ಲಿ ಐದಕ್ಕಿಂತ ಕಡಿಮೆ ಸಂಖ್ಯೆಯ ಜನರು ಮಾತ್ರ ಪೂಜೆ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಆದರೆ ಸಾರ್ವಜನಿಕ ರಸ್ತೆ, ವೃತ್ತ ಅಥವಾ ಇತರ ಯಾವುದೇ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಾರದು.

ಮಹಾನಗರಪಾಲಿಕೆಯಿಂದ ಗಣೇಶ ವಿಸರ್ಜನೆಗಾಗಿ ಗುರುತಿಸಿರುವ ಸಾರ್ವಜನಿಕ ಕೆರೆ, ಭಾವಿಗಳಲ್ಲಿ ಮಾತ್ರ ಗಣೇಶ ವಿಸರ್ಜನೆ ಮಾಡಬೇಕೆಂದು ಎಂದು ಜಿಲ್ಲಾಧಿಕಾರಿ ಹೇಳಿದರು.

ವಿಘ್ನನಿವಾರಕನ ಹಬ್ಬವನ್ನು ಎಲ್ಲರೂ ಸರಳವಾಗಿ ಮತ್ತು ಕುಟುಂಬಕ್ಕೆ ಸೀಮಿತಗೊಳಿಸಿ ನಮ್ಮನಮ್ಮ ಮನೆಗಳಲ್ಲಿ ಆಚರಿಸೋಣ. ಶಾಂತಿ, ಸೌರ್ಹದತೆಯಿಂದ ಹಬ್ಬ ಆಚರಿಸಿ, ಮಾದರಿಯಾಗೋಣ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಮಾತನಾಡಿ, ಸರಕಾರ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲ. ಡಿಜೆ ಅಥವಾ ಮೈಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೋರೊನಾ ಹಾವಳಿಯಲ್ಲಿ ಪೊಲೀಸ್ ಸಿಬ್ಬಂದಿ ಸಾಕಷ್ಟು ಕಷ್ಟಪಡುತ್ತಿದ್ದು, ಇಲಾಖೆಯೊಂದಿಗೆ ಸಹಕರಿಸಿ, ಶಾಂತಿ, ಸುವ್ಯವಸ್ಥೆಯಿಂದ ಎಲ್ಲರೂ ಗಣೇಶ ಹಬ್ಬವನ್ನು ಆಚರಿಸಬೇಕೆಂದು ಹೇಳಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಹುಬ್ಬಳ್ಳಿ ಗಜಾನನ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಉಪ ಪೊಲೀಸ್ ಆಯುಕ್ತ ಕೃಷ್ಣಕಾಂತ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಗಜಾನನ ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿದರು.

ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಉಪ ಪೊಲೀಸ ಆಯುಕ್ತ ಆರ್.ಬಿ.ಬಸರಗಿ, ಅಬಕಾರಿ ಉಪ ಆಯುಕ್ತ ಶಿವನಗೌಡ ಪಾಟೀಲ, ಎಸಿಪಿ ಅನುಷಾ.ಜಿ, ಪರಿಸರ ಅಧಿಕಾರಿ ಶೋಭಾ ಪೊಳ, ಆರ್.ಟಿ.ಓ ಅಪ್ಪಯ್ಯ ನಾಲ್ವತ್ತವಾಡಮಠ, ತಹಸಿಲ್ದಾರರಾದ ಡಾ.ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ನವೀನ ಹುಲ್ಲೂರ, ಅಶೋಕ ಶಿಗ್ಗಾಂವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಣೇಶ ಮೂರ್ತಿ ತಯಾರಕ ಕಲಾವಿದರು, ಸಾರ್ವಜನಿಕ ಗಣೇಶ ಮಂಡಳಿಗಳ ಸದಸ್ಯರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

Tagged
PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *