ಕ್ರೀಡೆ

ಕುಂಟಾಬಿಲ್ಲೆ, ಚಿನ್ನಿದಾಂಡು, ಲಗೋರಿ, ಗೋಲಿ, ಟೈರ್ ಓಟ ಆಡಿ ಕುಣಿದು ಕುಪ್ಪಳಿಸಿದ ಮಕ್ಕಳು,ಮಹಿಳೆಯರು

ಅನಾವರಣಗೊಂಡ ಹತ್ತು ಹಲವು ದೇಸಿ ಕ್ರೀಡೆಗಳು
 ಧಾರವಾಡ prajakiran.com : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಜನಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 158ನೇ ಜಯಂತಿಅಂಗವಾಗಿ ವಿವಿಧ ದೇಸಿ ಕ್ರೀಡಾಕೂಟಗಳು ಸೋಮವಾರ  ನಡೆದವು.
ನೂರಾರು ಮಕ್ಕಳು, ಯುವಕರು, ಯುವತಿಯರು, ಮಹಿಳೆಯರು, ಹಿರಿಯ ನಾಗರಿಕರು ಹೀಗೆ ಎಲ್ಲರು ತಮ್ಮ ವಯಸ್ಸಿನ ಭೇದಭಾವ ಮರೆತು ಮಕ್ಕಳಾಗಿ ಕ್ರೀಡಾಸ್ಪೂರ್ತಿ ಮೆರೆದರು.

ಅದರಲ್ಲೂ ವಿಶೇಷವಾಗಿ ಆಧುನಿಕ ಯುಗದ ಜಂಜಾಟದ ಬದುಕಿನಲ್ಲಿ ಮರೆತು ಹೋಗಿರುವ ಹತ್ತು ಹಲವು ದೇಸಿ ಕ್ರೀಡಾಕೂಟಗಳಿಗೆ ಇಲ್ಲಿ ಭಾರೀ ಮಹತ್ವ ನೀಡಲಾಗಿತ್ತು.

ಬುಗರಿ, ಕುಂಟಾಬಿಲ್ಲೆ, ಚಿನ್ನಿದಾಂಡು, ಹಗ್ಗ ಜಗ್ಗಾಟ, ನಿಂಬೆಹಣ್ಣಿನ ಚಮಚ ಓಟ, ಗೋಣಿ ಚೀಲ ಓಟ, ಲಗೋರಿ, ಟೈರ್ ಓಡಿಸುವ ಸ್ಪರ್ಧೆಗಳಲ್ಲಿ ಅನೇಕರು ವಯಸ್ಸಿನ ಭೇದ ಭಾವ ಮರೆತು ಅವುಗಳನ್ನು ಆಡಿ ಅನೇಕರು ತಮ್ಮ ಬಾಲ್ಯದ ನೆನಪಿಗೆ ಜಾರಿ ಸಂಭ್ರಮಿಸಿದರು.

ಎಲ್ಲರೂ ಮೈ ಚಳಿ ಬಿಟ್ಟುದೇಸಿ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು ಹಾಗೂ ಯುವಕರ ಸಡಗರ ಕೇಕೆ, ಚೀರಾಟ, ಹಾರಾಟ ಹಾಗೂ ಗೆಲುವಿನ ನಗೆ ಮುಗಿಲು ಮುಟ್ಟಿತ್ತು.

ಇದಕ್ಕೂ ಮುನ್ನ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೇಣುಗೋಪಾಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ 3 ರ ಸಹಾಯಕ ಆಯುಕ್ತ ಆರ್.ಎಂ. ಕುಲಕರ್ಣಿ ಕ್ರೀಡಾಕೂಟಕ್ಕೆ ದೇಸಿ ಕ್ರೀಡಾಕೂಟಗಳ ಮೂಲಕವೇ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದಅವರು, ಆಧುನಿಕತೆ ಬೆಳೆದಂತೆ ದೇಸಿ ಕ್ರೀಡೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಹೆಚ್. ಕೋರವರ ಸ್ವಾಮಿವಿವೇಕಾನಂದರ 158ನೇ ಜಯಂತಿ ಅಂಗವಾಗಿ ಇಂತಹ ಪ್ರಯತ್ನ ಮಾಡಿರುವುದು ನಿಜಕ್ಕೂ ಅಭಿನಂದನೀಯ. ದೇಸಿ ಕ್ರೀಡೆಗಳತ್ತ ನಮ್ಮ ಯುವಜನಾಂಗ ಅದರಲ್ಲೂ ಮಕ್ಕಳೂ ವಿಶೇಷ ಆಸಕ್ತಿವಹಿಸಬೇಕು ಎಂದು ಕರೆ ನೀಡಿದರು,.

ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಕೊರವರಅವರು ಮಾತನಾಡಿ, ಹತ್ತು ಹಲವು ದೇಸಿ ಕ್ರೀಡೆಗಳು ಕಣ್ಮರೆಯಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ.ಅದರಲ್ಲೂ  ಮೊಬೈಲ್, ಟಿವಿ ಜಗತ್ತಿನಲ್ಲಿ ಮುಳುಗಿ ಹೋಗಿರುವ ಇಂದಿನ ಮಕ್ಕಳು, ಯುವಕರು ಹಾಗೂ ಮಹಿಳೆಯರನ್ನು ಅದರಿಂದ ಹೊರತಂದು ಅವರಿಗೆ ನಮ್ಮ ಹಳ್ಳಿ ಸೊಗಡನ್ನು ಅನಾವರಣಗೊಳಿಸುವ ಮಹತ್ವಾಂಕ್ಷೆಯಿಂದ ಈ ದೇಸಿ ಕ್ರೀಡಾಕೂಟವನ್ನು ಆಯೋಜಿಸಿದ್ದೇವೆ.

ನೂರಾರು ಮಕ್ಕಳು, ಯುವಕರು, ಮಹಿಳೆಯರು ಹಾಗೂ ವಿಶೇಷವಾಗಿ ಹಿರಿಯ ನಾಗರಿಕರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಬಾಲ್ಯಕ್ಕೆ ಜಾರಿರುವುದು ಖುಷಿ ಕೊಟ್ಟಿದೆ.

ಇಂತಹ ಕ್ರೀಡಾಕೂಟಗಳನ್ನು ಪದೇ ಪದೇ ಆಡುವುದರಿಂದ ಮೈ ಮನ ಪುಳಕಿತಗೊಳ್ಳುವುದಲ್ಲದೆ, ಆರೋಗ್ಯಕ್ಕೂ ಹಾಗೂ ಮನಸ್ಸಿಗೂ ಉತ್ತಮ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೀಗಾಗಿ   ಪ್ರತಿಯೊಬ್ಬರು ದೇಸಿಕ್ರೀಡೆಗಳತ್ತ ಮುಖಮಾಡಬೇಕು ಎಂದು ತಿಳಿಸಿದರು.

ಕ್ರೀಡೆಯಲ್ಲಿ ಭಾಗವಹಿಸಿದ ಮಹಿಳಾಸಂಘದ ಅಧ್ಯಕ್ಷೆ ಸಾವಿತ್ರಿ ಅಗಳಗಟ್ಟಿ, ಸುಶೀಲಾ ಕಾಂಬಳೆ, ಸುಮಾ ಕೊರವರ, ರೇಣುಕಾ ಪೂಜಾರ, ಪ್ರೇಮಾ ಬಾವಿ ಹಾಗೂ ಹಿಟಾಚಿ ಕಂಪನಿಯ ಮಹಿಳೆಯರು ಹಲವು ದಶಕಗಳ ನಂತರ ಇಂತಹ ಕ್ರೀಡೆಯಲ್ಲಿ ಭಾಗವಹಿಸಿದ ಸಂತಸ ದೊರೆತಿದೆ. ಮನೆ, ಮಕ್ಕಳು, ನೌಕರಿ ಜಂಜಾಟದಲ್ಲಿ ಮರೆತು ಹೋಗಿದ್ದ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಇಂತಹ ದೇಸಿ ಕ್ರೀಡೆಗಳನ್ನು ಆಯೋಜಿಸಿದ್ದಕ್ಕೆ ಜನಜಾಗೃತಿ ಸಂಘದಅಧ್ಯಕ್ಷ ಬಸವರಾಜ ಕೊರವರಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ದೇಸಿಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಹಿರಿಯ ನಾಗರಿಕರು, ಚಿನ್ನಿದಾಂಡು ಹಾಗೂ ಬುಗರಿ ಆಡಿಸುವ ಮೂಲಕ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

 ಈ ಸಂದರ್ಭದಲ್ಲಿ ಈರಣ್ಣಅಗಳಗಟ್ಟಿ, ಬಸವಣ್ಣೆಪ್ಪ ಕಮತಿ, ಸಿ.ಜಿ. ದ್ಯಾವನಗೌಡರ, ಐ.ಎಸ್. ಗೊಂಬಿ, ಕೆ.ಆರ್. ಶೆಟ್ಟಿ, ಆರ್.ಹೆಚ್. ಕಾಂಬಳೆ, ನೀಲೇಂದ್ರ ಗುಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *