ರಾಜ್ಯ

ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿಯೂ ಶೇ.90 ರಷ್ಟು ಲಸಿಕಾಕರಣ

ಹುಬ್ಬಳ್ಳಿ prajakiran.com : ಬರುವ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಶೇ.90 ರಷ್ಟು ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ಆವರಣದ ಸಭಾಂಗಣದಲ್ಲಿ “100 ಕೋಟಿ ಲಸಿಕಾಕರಣ- ಭಾರತ ದೇಶದ ಪಯಣ” ಕಾರ್ಯಕ್ರಮ ಉದ್ಘಾಟನೆ ಹಾಗೂ ಮಕ್ಕಳಲ್ಲಿ ನ್ಯುಮೋನಿಯಾ ತಡೆಯುವ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಸಮರ್ಪಣೆ ಮಾಡಿ ಮಾತನಾಡಿದರು. 

ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ; ಆದರೆ ವಿಶ್ರಮಿಸುವುದು ಬೇಡ ಎಂದರು.

ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು (Convert calamity into opportunity) ಎಂಬ ಮಾತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಮಾಡಿ ತೋರಿಸಿದೆ.

ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ. 90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ. 70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು ನೂರು ವರ್ಷಗಳ ಹಿಂದೆಯೇ ಸಾಬೀತಾಗಿದೆ.

ಪೆನ್ಸಿಲಿನ್‌ಲಿಂದ ಪೊಲಿಯೋವರೆಗೆ ಅನೇಕ ಲಸಿಕೆಗಳು ಮನುಷ್ಯನಿಗೆ ಬಾಹ್ಯವಾಗಿ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗಿದೆ.

ವೈರಾಣುಗಳಿಗೆ ಭೌಗೋಳಿಕ ಗಡಿಗಳು ಇರುವುದಿಲ್ಲ. ಅಣುಸ್ಫೋಟದಂತೆ ಅದು ವೇಗವಾಗಿ ಹರಡಬಲ್ಲದು. ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ಕಾರ್ಯತತ್ಪರರಾಗಿದ್ದಾರೆ ಎಂದು ನುಡಿದರು.

ಕೋವಿಡ್‌ನಿಂದಾಗಿ ದೇಶ ಮಾತ್ರವಲ್ಲ ಇಡೀ ವಿಶ್ವ ಸಮುದಾಯದ ಒಟ್ಟು ಆರೋಗ್ಯ ಸದೃಢವಾಗಿರಬೇಕು ಎಂಬ ಪಾಠ ಕಲಿತಿದ್ದೇವೆ.

ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ.

4 ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಬೆಡ್‌ಗಳ ಸೌಲಭ್ಯ ಸ್ಥಾಪನೆಯಾಗಿವೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು.

ಉತ್ತರ ಕರ್ನಾಟಕದ ಹೆಮ್ಮೆಯ ಹಾಗೂ ಬಡವರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಯನ್ನು ಈ ಪ್ರದೇಶದ 6 ರಿಂದ 7 ಜಿಲ್ಲೆಗಳು ಅವಲಂಬಿಸಿವೆ.

ಕೋವಿಡ್ ಮೊದಲ ಮತ್ತು ಎರಡನೇ ಅವಧಿಯಲ್ಲಿ ಕಿಮ್ಸ್ ನೀಡಿದ ಸೇವೆ ಶ್ಲಾಘನೀಯವಾಗಿದೆ. ಈ ಸಂಸ್ಥೆ ತನ್ನ ಒಟ್ಟು ಸಾಮರ್ಥ್ಯವನ್ನು ಕ್ರೋಢೀಕರಿಸಿ ಸೇವೆ ನೀಡಿದ ಪರಿಣಾಮ ಸಾವಿರಾರು ಜನರ ಪ್ರಾಣ ಉಳಿದಿದೆ.

ಬ್ಲ್ಯಾಕ್ ಫಂಗಸ್ ಖಾಯಿಲೆಗೂ ಕೂಡ ಕಿಮ್ಸ್‌ನಲ್ಲಿ ಪರಿಣಾಮಕಾರಿ ಚಿಕಿತ್ಸೆ ದೊರೆತಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತಕಂಠದಿಂದ ಶ್ಲಾಘನೆ ಮಾಡಿದರು.

ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ‌.

ಮಕ್ಕಳಿಗೆ ನೀಡುತ್ತಿರುವ ಲಸಿಕೆಗಳ ಜೊತೆಗೆ ನ್ಯುಮೋನಿಯಾ ತಡೆಯಲು ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಮಗುವಿನ ಒಂದೂವರೆ, ಮೂರುವರೆ ಹಾಗೂ ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಈ ಲಸಿಕೆ ಹಾಕಿಸಬೇಕು ಎಂದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *