ರಾಜ್ಯ

ರೈತ ವಿರೋಧಿ ಕೃಷಿ ಕಾನೂನುಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹ

ಅಮರಗೋಳದಿಂದ ಧಾರವಾಡದವರೆಗೆ ಹದಿನಾಲ್ಕು ಕಿಲೋ ಮೀಟರ್ ಪಾದಯಾತ್ರೆ ನಡೆಸಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ

ಟ್ರ್ಯಾಕ್ಟರ್ ರ್ಯಾಲಿಗೆ ನೂರಾರು ರೈತರ ಸಾಥ್ : ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ

ಧಾರವಾಡ prajakiran.com : ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ದೇಶದೆಲ್ಲಡೆ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಧಾರವಾಡದಲ್ಲಿ ಮಂಗಳವಾರ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಯಿತು.

ಪಶ್ಚಿಮ ವಿಧಾನ ಸಭಾ ಕ್ಷೇತ್ರ-74ರ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಈ ರ್ಯಾಲಿಯಲ್ಲಿ ನೂರಾರು ರೈತರು ಟ್ರ್ಯಾಕ್ಟರ್ ಸಮೇತ ಪಾಲ್ಗೊಂಡು ಸರಕಾರಕ್ಕೆ ಬಿಸಿ ತಾಕಿಸಿದರು.

ಹುಬ್ಬಳ್ಳಿಯಅಮರಗೋಳದಿಂದ ಧಾರವಾಡದ ಕೋರ್ಟ್ ವೃತ್ತದವರೆಗೆ ಸುಮಾರು ಹದಿನಾಲ್ಕು ಕಿಲೋ ಮೀಟರ್ ಬೃಹತ್ ಪಾದಯಾತ್ರೆ ನಡೆಸಿ ಕೇಂದ್ರ ಹಾಗೂ ರಾಜ್ಯದ ಸರಕಾರದ ವಿರುದ್ದ ಕಿಡಿಕಾರಿದ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಅವರು, ರೈತರ ನಿರಂತರ ಹೋರಾಟಕ್ಕೆ ಮಣಿಯದ ಸರಕಾರ ಹಠಮಾರಿ ಧೋರಣೆಯನ್ನು ಕೈ ಬಿಡಬೇಕು.

ಅದಾನಿ, ಅಂಬಾನಿ, ಮಿತ್ತಲ್ ಅವರ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಬಿಟ್ಟು ದೇಶದ ಅನ್ನದಾತರ ಹಿತಕಾಪಾಡಬೇಕು. ಹಳ್ಳಿಯಿಂದ ದಿಲ್ಲಿಯವರೆಗೆ ರೈತ ವಿರೋಧಿ ಕೂಗು ಬಲಗೊಂಡಿದ್ದು, ಬರುವ ದಿನಗಳಲ್ಲಿ ಬಿಜೆಪಿಗೆ ದೇಶದಲ್ಲಿ ನೆಲೆ ಇಲ್ಲದಂತೆ ಮಾಡಲಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ತಕ್ಷಣ ಹಿಂಪಡೆಯುವಂತೆ ಸುಮಾರು 60 ದಿನಗಳಿಂದ ರೈತರು ದೆಹಲಿ ಸುತ್ತಮುತ್ತ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದನೆ ನೀಡಿಲ್ಲ.

ಹೀಗಾಗಿ ಇಂದು ರೈತರು ದೇಶದೆಲ್ಲಡೆ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರೊಂದಿಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಫಲ ನೀಡಿಲ್ಲ. ಹೀಗಾಗಿ ರೈತರು ಬೃಹತ್ ಮಟ್ಟದ ರ್ಯಾಲಿ ನಡೆಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಈ ಹೋರಾಟ ಇನ್ನಷ್ಟು ತೀವ್ರತೆ ಪಡೆಯುವ ಮುನ್ನವೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಬಳಿ ರ್ಯಾಲಿಗೆ ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಸಿ ನೀರು ಉಣಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು.

ಬಳಿಕ ಆರ್ಶೀವಚನ ನೀಡಿದ ಮಲ್ಲಿಕಾರ್ಜುನ ಸ್ವಾಮೀಜಿ, ದೇಶಕ್ಕೆ ಅನ್ನ ನೀಡುವ ರೈತರ ಜೊತೆಗೆ ಸರಕಾರಗಳು ಸೌಜನ್ಯದಿಂದ ನಡೆದುಕೊಳ್ಳಬೇಕು.

ಅನ್ನವೇ ಇಲ್ಲದಿದ್ದರೆ ಮನುಷ್ಯ ಬದುಕುವುದು ಕಷ್ಟವಾಗಲಿದೆ. ಅವರ ಬೇಕು ಬೇಡಿಕೆಗಳಿಗೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸುವ ಮೂಲಕ ಮಾನವೀಯತೆ ಮೆರಯಬೇಕು ಎಂದು ಸಲಹೆ ನೀಡಿದರು.

ಬಳಿಕ ಧಾರವಾಡ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪೂಗೌಡ ಪಾಟೀಲ, ಮಹಿಳಾ ಕಾಂಗ್ರೆಸನ ದೇವಕಿ ಯೋಗಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ,ಕಿಸಾನ್ ಮೋರ್ಚಾದ ರಫೀಕ ದರಗದ, ಬಸವರಾಜ ಕಿತ್ತೂರು, ಪಾಲಿಕೆ ಮಾಜಿ ಸದಸ್ಯ ಸುಭಾಸ ಶಿಂಧೆ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ನೂರಾರು ರೈತರು ಟ್ರ್ಯಾಕ್ಟರ್ ಸಮೇತ ಪಾಲ್ಗೊಂಡು ಹೋರಾಟಕ್ಕೆ ಮೆರಗು ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *