ಬೆಂಗಳೂರು prajakiran. com, ಜೂನ್ 18: ಕಾಂಗ್ರೆಸ್ ನವರು ಬೌದ್ಧಿಕವಾಗಿ, ರಾಜಕೀಯವಾಗಿ, ಸಂಘಟನಾತ್ಮಕವಾಗಿ ದಿವಾಳಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಜನಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ದೇಶದಲ್ಲಿ ಮತ್ತೊಮ್ಮೆ ಅರಾಜಕತೆಯನ್ನು ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಂತಿ ಇರುವಲ್ಲಿ ದೇಶದ ಪ್ರಗತಿ ಸಾಧ್ಯ. ಅವರಿಗೆ ಶಾಂತಿ ಬೇಕಾಗಿಲ್ಲ.
ಅಧಿಕಾರ ಬೇಕು. ಅದಕ್ಕಾಗಿ ಯಾವುದೇ ಮಾರ್ಗ ಹಿಡಿಯಲು ತಯಾರಿದ್ದಾರೆ. ಸಣ್ಣ ವಿಚಾರವನ್ನು ತೆಗೆದುಕೊಂಡು ಬೀದಿಗಿಳಿದು ಸಮಾಜದಲ್ಲಿ ಅರಾಜಕತೆ, ಕ್ಷೋಭೆಯನ್ನು ಉಂಟು ಮಾಡುತ್ತಿದ್ದಾರೆ.
ಹಿಂದೆ ಕಾಂಗ್ರೆಸ್ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಎಲ್ಲರನ್ನೂ ಜೈಲಿಗೆ ಹಾಕಿದ್ದರು. ಯಾವುದೇ ವ್ಯಕ್ತಿ, ಪತ್ರಿಕೆಗಳ ಸ್ವಾತಂತ್ರ್ಯ ಅವರಿಗೆ ಇರಕೂಡದು. ಸರ್ಕಾರದ ವಿರುದ್ಧ ಯಾರೂ ಮಾತನಾಡುವಂತಿರಲಿಲ್ಲ.
ಪೋಲಿಸರು ಯಾರನ್ನು ಬೇಕಾದರೂ ಬಂಧಿಸಬಹುದಾಗಿತ್ತು. ಅಂತಹ ಕಾಂಗ್ರೆಸ್ ಪಕ್ಷ, ಪ್ರಜಾಪ್ರಭುತ್ವ, ನಾಗರಿಕ ಹಕ್ಕುಗಳ ಬಗ್ಗೆ ಮಾತನಾಡುತ್ತದೆ ಎಂದರು.
*ಕಾಂಗ್ರೆಸ್ಸಿಗೆ ದೇಶ ಮುನ್ನಡೆಸುವ ನೈತಿಕ ಹಕ್ಕಿಲ್ಲ*
ರಾಹುಲ್ ಗಾಂಧಿಯವರನ್ನು ಹಣಕಾಸಿನ ದುರ್ಬಳಕೆ ಮಾಡಿದ ಪ್ರಕರಣದಲ್ಲಿ ವಿಚಾರಣೆಗೆ ಕರೆದರೆ ಇವರು ಪ್ರತಿಭಟಿಸುತ್ತಾರೆ.
ಅಂದರೆ ಗಾಂಧಿ ಕುಟುಂಬ ಎಲ್ಲಾ ಕಾನೂನಿಗಿಂತ ದೊಡ್ಡವರಾ? ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಎಲ್ಲಕ್ಕಿಂತ ದೊಡ್ಡದು ಎಂದರೆ ಅದು ನ್ಯಾಯ. ಹಾಗೂ ಅದನ್ನು ನೀಡುವ ಕಾನೂನು.ಅದರ ಕೆಳಗೆ ಎಲ್ಲರೂ ಬರುತ್ತಾರೆ. ಹಲವಾರು ನಾಯಕರನ್ನು ವಿನಾ ಕಾರಣ ಜೈಲಿನಲ್ಲಿಟ್ಟಿದ್ದರು.
ಆಗ ಇದೇ ರೀತಿ ಪ್ರತಿಭಟನೆ ಮಾಡಿದ್ದೆವಾ? ಇದೇ ಸಿಬಿಐ ಯನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ ವೆಸ್ಟಿಗೇಷನ್ ಎಂದು ಇಡೀ ಜಗತ್ತು ಕರೆಯಿತು.
ತಮ್ಮ ಕೈಯಲ್ಲಿ ಅಧಿಕಾರವಿದ್ದಾಗ ಯಾವ ರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ನೆನೆಪು ಮಾಡಿಕೊಳ್ಳಬೇಕು. ಎಷ್ಟು ಜನರಿಗೆ ಅನ್ಯಾಯ ಮಾಡಿದ್ದಾರೆ, ಎಷ್ಟು ಹಣವನ್ನು ಲೂಟಿ ಮಾಡಿದ್ದಾರೆ,
ದೇಶವನ್ನು ಎಷ್ಟು ಬಾಹ್ಯ ಶಕ್ತಿಗಳಿಂದ ತುಂಬಿಸಿದ್ದಾರೆ. ಸಣ್ಣ ರಾಷ್ಟ್ರಗಳೂ ನಮ್ಮನ್ನು ಹೆದರಿಸುವಂತಾಗಿತ್ತು. ಈಗ ಅಧಿಕಾರಕ್ಕಾಗಿ ದೊಡ್ಡ ಮಾತುಗಳನ್ನಾಡುತ್ತಿದ್ದಾರೆ.
ಇವರಿಗೆ ದೇಶವನ್ನು ಮುನ್ನಡೆಸುವ ಯಾವುದೇ ರೀತಿಯ ನೈತಿಕ ಹಕ್ಕಿಲ್ಲ. ಕರ್ನಾಟಕದ ಕಾಂಗೆಸ್ ನಾಯಕರು. ಅಧಿಕಾರ ಸಿಕ್ಕಿದೆ ಎಂದು ಖಾತೆಗಳಿಗೆ ಜಗಳವಾಡುತ್ತಿದ್ಧಾರೆ.
ಇಡೀ ದೇಶದಲ್ಲಿ ಮಾತ್ರವಲ್ಲ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಳುಗಲಿದೆ. ಭಾರತೀಯ ಜನತಾ ಪಕ್ಷ ಒಗ್ಗೂಡಿ ಮುಂದೆ ಹೋಗಿ ಮತ್ತೊಮ್ಮೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಮಲ ಅರಳಿಸೋಣ.
ನಮ್ಮದು ಭಾರತ್ ಮಾತಾ ಕಿ ಜೈ. ಕಾಂಗ್ರೆಸ್ ಅವರದ್ದು ಸೋನಿಯಾ ಮಾತಾ ಕಿ ಜೈ. ಜೈಕಾರ ಯಾರಿಗೆ ಹಾಕಬೇಕೆಂದು ನೀವು ತೀರ್ಮಾನಿಸಿ ಎಂದರು