ಕಲಬರುಗಿ prajakiran.com : ಇತ್ತೀಚೆಗೆ ಕೆಲವು ಯುವಕರು ಕಾಡು ಪ್ರಾಣಿಗಳು / ಸಾಕು ಪ್ರಾಣಿಗಳ ಬೇಟೆ ಆಡಿ ಸಾಮಾಜಿಕ ಜಾಲ ತಾಣಗಳಾದ ಟಿಕ್ ಟಾಕ್, ವಾಟ್ಸ್ ಅಪ್, ಫೇಸಬುಕ್ ಗಳಲ್ಲಿ ಹರಿ ಬಿಟ್ಟು ಸಾಲು ಸಾಲಾಗಿ ಜೈಲ್ ಸೇರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಕಲಬರುಗಿಯಲ್ಲಿ ಮತ್ತೇ ಇಂತಹ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ. ಕಲಬುರ್ಗಿ ಪ್ರ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ವಾನತಿ ಎಂ.ಎಂ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾವ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸುನೀಲ ಕುಮಾರ ಚವ್ಹಾಣ ಇವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾಶಿನಾಥ, ಅರಣ್ಯ ರಕ್ಷಕ ಹೈದರ್ ಅಲಿ, ಚೇತನ, ಅರಣ್ಯ ವೀಕ್ಷಕ ರೂಪೇಶ್ ಹಾಗೂ ವಾಹನ ಚಾಲಕ ದಯಾನಂದ ದಾಳಿ ಮಾಡಿ ಆರೋಪಿಗಳನ್ನು ಸೆರೆ ಹಿಡಿದು ವನ್ಯ ಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಬಂಧಿತರನ್ನುಕಲಬುರಗಿ ತಾಲೂಕಿನ ಬೋಳೆವಾಡ ಗ್ರಾಮದ ಅಂಬರೀಶ ಬಸವರಾಜ ನಾಯಕೋಡಿ, ನಾಗೇಶ ಶಂಕರ ನಾಯಕೋಡಿ ಎಂದು ಗುರುತಿಸಲಾಗಿದೆ.
ಇವರ ಜೊತೆಗೆ ಇದ್ದ ಸೋಮಣ್ಣ ಕತ್ತಲಪ್ಪ ಹಾಗೂ ಅಂಬರೀಶ ನರಸಪ್ಪ ಪರಾರಿಯಾಗಿದ್ದಾರೆ. ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗೆ ರಾಜ್ಯಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ ಮೊಟಗಿ) ಶ್ಲಾಘಿಸಿದ್ದಾರೆ.
ಇಂತಹವರಿಗೆ ತಕ್ಕ ಶಾಸ್ತಿ ಮಾಡಿ, ಮಟ್ಟ ಹಾಕಲೆಂದೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಪಶು ಸಂಗೋಪನೆ ಇಲಾಖೆ, ಹಣಕಾಸು ಇಲಾಖೆ, ಅರಣ್ಯ ಪರಿಸರ ಇಲಾಖೆ, ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಾರಿಗೆ ಇಲಾಖೆ, ಇತರೆ ಸಂಬಂಧಿಸಿದ ಇಲಾಖೆಗಳು ಒಳಗೊಂಡು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ರಚನೆಯಾಗಿದೆ.
ಅದರಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಕಾಡು ಪ್ರಾಣಿಗಳು ಬೇಟೆ ಯಾಡಿದ ಚಿತ್ರಗಳು ಹರಿ ಬಿಟ್ಟ ಹಿನ್ನಲೆಯಲ್ಲಿ ಸದರಿ ಆರೋಪಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದೆ.
ಹೀಗಾಗಿ ಈಗಲಾದರೂ ಯುವಕರು ಕಾಡುಪ್ರಾಣಿಗಳ ಬೇಟೆಯಾಡುವುದನ್ನು ಕೈ ಬಿಡಿದಿದ್ದರೆ ಜೈಲು ಪಾಲಾಗುವುದು ಖಚಿತ ಎಂದು ಅವರು ಎಚ್ಚರಿಸಿದ್ದಾರೆ.