ಅಂತಾರಾಷ್ಟ್ರೀಯ

ಕೊರೊನಾ ನಿಯಂತ್ರಣದಲ್ಲಿ ರಾಜ್ಯದ ಕ್ರಮಗಳ ಬಗ್ಗೆ ಅಮಿತ್ ಷಾ ಮೆಚ್ಚುಗೆ

ದಾವಣಗೆರೆ prajakiran. com ಸೆ. 2 : ದೇಶ ಮತ್ತು ಜಗತ್ತು ಹಿಂದೆಂದೂ ಕಂಡಿರದ, ಮಾನವಕುಲಕ್ಕೇ ಸವಾಲಾಗಿದ್ದ ಕೊರೊನಾ ಮಹಾಮಾರಿಯನ್ನು ಕರ್ನಾಟಕ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಸರ್ಕಾರವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಕರ್ನಾಟಕ ರಾಜ್ಯ ಮೊದಲಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದೆ.

ಈ ವರೆಗೆ ಸುಮಾರು 5.2 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಪೈಕಿ 4 ಕೋಟಿ ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, 1.16 ಲಕ್ಷ ಜನರಿಗೆ ಎರಡನೇ ಡೋಸ್ ಲಸಿಕೆಯನ್ನೂ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ. 90ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ವಿಶ್ವಾಸ ನನಗಿದೆ.

ಒಟ್ಟಾರೆ ಕೊರೊನಾ ವಿರುದ್ಧ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವದಾದ್ಯಂತ ಸರ್ಕಾರಗಳು ಕೋರೊನಾ ವಿರುದ್ಧ ಹೋರಾಡುತ್ತಿದ್ದರೆ, ಭಾರತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜೊತೆಗೆ ದೇಶದ 130 ಕೋಟಿ ಜನತೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೋವಿಡ್ ವಾರಿಯರ್ ಗಳು, ರಕ್ಷಣಾ ಸಿಬ್ಬಂದಿ ಹಾಗೂ ಸಫಾಯಿ ಕರ್ಮಚಾರಿಗಳು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಠಿಣ ನಿರ್ಬಂಧಗಳನ್ನು ಪಾಲಿಸಿದೆವು. ನಂತರ ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ನಮ್ಮ ದೇಶದಲ್ಲಿ ಪ್ರಾರಂಭವಾಯಿತು. ಇಂದು ನಾವು ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಅವರು ನುಡಿದರು.

ದೇಶದಲ್ಲಿ ಲಸಿಕೆ ಅಭಿಯಾನವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಿದ್ದು, ಎರಡು ದಿನಗಳ ಹಿಂದೆ ಒಂದೇ ದಿನದಲ್ಲಿ 1.36 ಕೋಟಿ ಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ ನಮ್ಮ ದೇಶದ ದಾಖಲೆಯನ್ನೇ ಮುರಿದು ಹೊಸ ದಾಖಲೆ ನಿರ್ಮಿಸಿದ್ದೇವೆ.

ಶೇ ನೂರರಷ್ಟು ಲಸಿಕೆ ನೀಡುವುದೇ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸುವ ಮಾರ್ಗ. ಭಾರತ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಒದಗಿಸುತ್ತಿದೆ. ಲಸಿಕೆ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸಲು ಸಾರ್ವಜನಿಕರು ಹಾಗೂ ವಿಶೇಷವಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರು ಮತ್ತಿತರ ಗಣ್ಯರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *