ರಾಜ್ಯ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅವ್ಯವಹಾರ ಕುರಿತು ಸಮಗ್ರ ತನಿಖೆಗೆ ಬಸವರಾಜ ಕೊರವರ ಆಗ್ರಹ

ಐಡಿಪಿ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ

ಇಬ್ಬರು ಯುವತಿಯರ ಸಾವಿನ ಹಿಂದೆ ಹಲವು ಅನುಮಾನ 

ಕುಲಪತಿ ಆಪ್ತ ಸಹಾಯಕ ಮುಲ್ಲಾ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿ

ಧಾರವಾಡ : ದೇಶದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿ ಅವ್ಯವಹಾರ, ಅಕ್ರಮ ಹಾಗೂ ಗೊಂದಲಗಳಿಗೆ ಸಿಲುಕಿ ಸುದ್ದಿಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಇನ್ಸಿಟ್ಯೂಟಶನಲ್ ಡೆವಲಪಮೆಂಟ್ ಪ್ರೋಗ್ರಾಮ್( ಐಡಿಪಿ -ಸಾಂಸ್ಥಿಕ ಅಭಿವೃದ್ದಿ ಯೋಜನೆ) ವಿಶ್ವದ ಬೇರೆ ಬೇರೆ ದೇಶಗಳಲ್ಲಿ ೨೫೦ ವಿದ್ಯಾರ್ಥಿಗಳನ್ನ ತರಬೇತಿ ನೀಡಿ ಕೃಷಿ ಆಧಾರಿತ ಸ್ವಾವಲಂಬಿ ಸ್ವ ಉದ್ಯಮಿಗಳನ್ನಾಗಿ ಮಾಡಿ ಅವರ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಒದಗಿಸುವ ಮಹತ್ವಾಂಕ್ಷೆ ಹೊಂದಿರುವ ಈ ಐಡಿಪಿ ಯೋಜನೆಗೆ ಕೇಂದ್ರ ಸರಕಾರ ೨೫ ಕೋಟಿ ಮೊತ್ತ ಮೀಸಲಿಟ್ಟಿದೆ.

ಅದರಲ್ಲಿ ಈವರೆಗೆ ಅಂದಾಜು ೬.೬ ಕೋಟಿಗೂ ಅಧಿಕ ಅನುದಾನ ಬಿಡುಗಡೆಗೊಳಿಸಿದೆ.
ವಿಶ್ವಬ್ಯಾಂಕ್ ನಿಂದ ಸಾಲ ಪಡೆದು ಕೇಂದ್ರ ಸರಕಾರ ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಈ ಅನುದಾನ ನೀಡಿದೆ. ಆದರೆ ಹಣ ಸದುಪಯೋಗವಾಗುವ ಬದಲಿಗೆ ದುರುಪಯೋಗವಾಗಿದೆ.

ಈ ಅವ್ಯವಹಾರದ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಆಗ್ರಹಿಸಿದರು.

ಅವರು ಶುಕ್ರವಾರ ನಗರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅವ್ಯವಹಾರದ ಕುರಿತು ಹಲವು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಈ ಯೋಜನೆಯಲ್ಲಿ ಅವ್ಯವಹಾರ ವಾಸನೆ ಮೇಲ್ನೋಟಕ್ಕೆ ಸ್ಪಷ್ಟ :
ಈ ಯೋಜನೆಯಲ್ಲಿ ೭೦ ಲಕ್ಷದವರೆಗೆ ಯಾವುದೇ ಟೆಂಡರ್ ಕರೆಯದೆ ಹಣವನ್ನು ಬಳಸಿಕೊಳ್ಳಲು ವಿಶ್ವವಿದ್ಯಾಲಯಕ್ಕೆ ಅವಕಾಶ ನೀಡಲಾಗಿದೆ.

ಅದನ್ನೇ ಬಂಡವಾಳವನ್ನಾಗಿಸಿಕೊಂಡು ಹಣ ದುರುಪಯೋಗ ಪಡಿಸಿಕೊಂಡಿರುವುದು ಹಲವು ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಉದಾಹರಣೆಗೆ ಆರ್ ಓ ಪ್ಲಾಂಟ್ (ಅಲ್ಟ್ರಾ ವಾಟರ್ ಪೂರಿಪಿಕೇಶನ್ ಸಿಸ್ಟಮ್) ಗೆ ಮಾರುಕಟ್ಟೆ ಬೆಲೆ ಅಂದಾಜು ಆರು ಲಕ್ಷವಿದೆ.

ಆದರೆ ಇವರು ಅದನ್ನು ೧೫ ಲಕ್ಷಕ್ಕೂ ಅಧಿಕ ಹಣ ನೀಡಿ ಖರೀದಿಸಿದ್ದಾರೆ. ಅದೇ ರೀತಿ ಕಚೇರಿ ಸಾಮಾಗ್ರಿ ಖರೀದಿಗೆ ೧೧ ಲಕ್ಷ ಮೊತ್ತದ ಸಾಮಾಗ್ರಿಗಳಿಗೆ ಸುಮಾರು ೨೦.೧೮ ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಲಾಗಿದೆ.

ಅದೇ ರೀತಿ ಸಿಸಿ ಟಿವಿ ಕ್ಯಾಮರಾ ಖರೀದಿಗೆ ಮೂಲ ಬೆಲೆ ೧೦ ಲಕ್ಷ ೮೦ ಸಾವಿರ ಇದೆ. ೪೪ ಸಿಸಿ ಟಿವಿ ಕ್ಯಾಮರಾಗಳಿಗೆ ೨೩ ಲಕ್ಷಕ್ಕೂ ಅಧಿಕ ಮೊತ್ತ ಪಾವತಿಸಿದ್ದಾರೆ. ಇದಕ್ಕೆ ಉತ್ತರಪ್ರದೇಶದ ಸುಳ್ಳು ವಿಳಾಸ ಇರುವ ರಶೀದಿ ಲಗ್ಗತ್ತಿಸಲಾಗಿದೆ.

ಯುಪಿಎಸ್ ಖರೀದಿಯಲ್ಲಿ ಕೂಡ ಅವ್ಯವಹಾರ ನಡೆದಿದೆ. ಅದರ ಮೂಲ ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು ನೀಡಿ ಖರೀದಿಸಲಾಗಿದೆ.

ಅಚ್ಚರಿ ಹಾಗೂ ದುರಂತದ ಸಂಗತಿಯೆಂದರೆ ಕ್ಯಾನನ್ ಕ್ಯಾಮರಾ ಖರೀದಿ ಮಾಡಿದ ಹುಬ್ಬಳ್ಳಿಯ ಅಂಗಡಿ ಬಂದ್ ಆಗಿಯೇ ಹಲವು ವರ್ಷಗಳು ಆಗಿವೆ. ಅದರ ರಶೀದಿಯನ್ನು ಲಗ್ಗತ್ತಿಸಿ, ಬಿಲ್ ಮೊತ್ತ ಪಾವತಿಸಿದ್ದಾರೆ.

ನಕಲಿ ಬಿಲ್ ಪೂರೈಕೆ ಹಿಂದೆ ಕುಲಪತಿ ಆಪ್ತ ಕಾರ್ಯದರ್ಶಿ ಎಂ.ಎ. ಮುಲ್ಲಾ ಕೈವಾಡವಿದೆ. ಅದರ ಆಡಿಯೋ ಕೂಡ ಇವೆ ಎಂದರು.

ನಕಲಿ ಬಿಲ್ ನೀಡಿದ ಎಲ್ಲಾ ದಾಖಲೆಗಳು ಕೂಡ ನಮ್ಮ ಬಳಿ ಇವೆ ಎಂದು ಪ್ರದರ್ಶನ ಮಾಡಿದರು.
ಇಬ್ಬರು ಯುವತಿಯರ ಸಾವಿನ ಹಿಂದೆ ಹಲವು ಅನುಮಾನ :
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಈ ಐಡಿಪಿ ಯೋಜನೆಯಲ್ಲಿ ಕೆಲಸ ಮಾಡುವ ಇಬ್ಬರು ಯುವತಿಯರು ಇತ್ತೀಚೆಗೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಈ ಸಾವಿನ ಹಿಂದೆ ಹಲವು ಅನುಮಾನಗಳಿವೆ. ಅವರು ಮನೆಯಲ್ಲಿ ಬಾಗಲಕೋಟೆಗೆ ಹೋಗುವುದಾಗಿ ಹೇಳಿದ್ದರು. ಆದರೆ ಗೋವಾಕ್ಕೆ ಹೋಗಿದ್ದರು. ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಈ ಪ್ರಕರಣದಲ್ಲಿ
ಕುಲಪತಿ ಡಾ. ಎಂ.ಬಿ. ಚಟ್ಟಿ ಅವರ ಆಪ್ತ ಸಹಾಯಕ ಮುಲ್ಲಾ ಶಾಮೀಲಾಗಿದ್ದಾರೆ. ಅವರು ಇವರನ್ನು ಕಾರವಾರಕ್ಕೆ ಅಂತ ಹೇಳಿ ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿ ವಿವಿಯ ಯಾವ ಕೆಲಸ ಕಾರ‍್ಯಗಳು ಇರಲಿಲ್ಲ.

ಅದರ ಹಿಂದೆಯೂ ಮಹಾರಾಷ್ಟ್ರದ ಎರಡು ಧಾರ್ಮಿಕ ಕ್ಷೇತ್ರಗಳಿಗೆ ಮುಲ್ಲಾ ಕರೆದುಕೊಂಡು ಹೋಗಿದ್ದ. ಅಲ್ಲದೆ, ಅವರನ್ನು ನೌಕರಿಯಿಂದ ಕೈ ಬಿಡುವುದಾಗಿ ಹೆದರಿಸಿ, ಬೆದರಿಸಿದ ವಾಟ್ಸಪ್ ಸಂದೇಶಗಳು ಕೂಡ ನಮ್ಮ ಬಳಿಯಿವೆ ಎಂದು ಮಹಾಂತೇಶ ಪಾಟೀಲ ವಿವರಿಸಿದರು.

ಅವರು ಹಲವು ಬಾರಿ ಕಚೇರಿಗೆ ಕುಡಿದು ಬಂದು ಅನಗತ್ಯ ಕಿರುಕುಳ ನೀಡಿದ್ದಾರೆ. ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ದುಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ಇದರ ಹಿಂದೆ ಹಲವು ಅನುಮಾನಗಳಿದ್ದು, ಅದರ ಕುರಿತು ಸಮಗ್ರ ತನಿಖೆಯಾಗಬೇಕು.
ತಕ್ಷಣವೇ ಮುಲ್ಲಾ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು.

ಈ ಬಗ್ಗೆ ಅವರ ಪೋಷಕರು ಕೂಡ ಹುಬ್ಬಳ್ಳಿ ಧಾರವಾಡ
ಪೊಲೀಸ ಆಯುಕ್ತರಿಗೆ ದೂರು ನೀಡಿದ್ದಾರೆ. ಎಸಿಪಿ ಅನುಷಾ ನೇತೃತ್ವದಲ್ಲಿ ತನಿಖೆ ನಡೆಯಲಿ.

ಆದರೆ ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಈ ಬಗ್ಗೆ ಮೌನ ಮುರಿಯಬೇಕಾದ ಕುಲಪತಿ ಡಾ. ಮಹಾದೇವ ಚಟ್ಟಿ ಅವರು ಸುಮ್ಮನೇ ಕುಳಿತಿರುವುದು ನೋಡಿದರೆ ಅವರ ಪಾತ್ರದ ಬಗ್ಗೆ ಕೂಡ ನಮಗೆ ಅನುಮಾನ ಬರುತ್ತಿದೆ.

ಅಲ್ಲದೆ ಅವರು ಆ ದಿನಗಳಲ್ಲಿ ಕರಾವಳಿ ಭಾಗದಲ್ಲಿಯೇ ಪ್ರವಾಸದಲ್ಲಿದ್ದರು ಎಂಬ ಮಾಹಿತಿ ಇದೆ. ಅವರನ್ನು ತಕ್ಷಣವೇ ರಜೆ ಮೇಲೆ ಕಳುಹಿಸಿ ಪ್ರಕರಣದ ತನಿಖೆಯನ್ನು ನಡೆಸಲು ಕೇಂದ್ರ ಕೃಷಿ ಸಚಿವರು, ರಾಜ್ಯಪಾಲರು, ಸಿಎಂ ಹಾಗೂ ರಾಜ್ಯದ ಕೃಷಿ ಸಚಿವರು ಸತ್ಯ ಶೋಧನಾ ಸಮಿತಿ ರಚಿಸಬೇಕು. ಆಗ ಎಲ್ಲಾ ಸತ್ಯಾಂಶ ಹೊರಬೀಳಲಿದೆ.

ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯಪಾಲ ವಜುಬಾಯಿ ರೂಢಾಬಾಯಿ ವಾಲಾ, ಮುಖ್ಯಮಂತಿ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಕೃಷಿ ಸಚಿವ ಬಿ.ಸಿ. ಪಾಟೀಲ, ರಾಜ್ಯ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

ಅವರು ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಅವರಿಬ್ಬರ ಸಾವಿಗೆ ನ್ಯಾಯ ಸಿಗುವರೆಗೆ ಜನಜಾಗೃತಿ ಸಂಘದವತಿಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿರುದ್ದ ಹೋರಾಟ ಮುಂದುವರೆಸಲಾಗುವುದು ಎಂದು ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಎಚ್ಚರಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *